
ಸಾವು
(ಪ್ರಾತಿನಿಧಿಕ ಚಿತ್ರ)
ಬೆಂಗಳೂರು: ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಒಂದೇ ಕುಟುಂಬದ ನಾಲ್ವರು, ಬಿಹಾರ ಪ್ರವಾಸಕ್ಕೆ ತೆರಳಿದ್ದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಾಲಕನ ಕೊಲೆ ಪ್ರಕರಣದ ಆರೋಪಿ ನಾಗಪ್ರಸನ್ನ (55), ಅವರ ತಾಯಿ ಸುಮಂಗಲಾ (78), ಸಹೋದರಿಯರಾದ ಶಿಲ್ಪಾ (48) ಹಾಗೂ ಶ್ರುತಿ (43) ಆತ್ಮಹತ್ಯೆ ಮಾಡಿಕೊಂಡವರು. ನಾಲ್ವರೂ ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ತುಮಕೂರಿನ ನಾಗಪ್ರಸನ್ನ ಕುಟುಂಬವು 20 ವರ್ಷಗಳಿಂದ ಸೋಲದೇವನಹಳ್ಳಿಯ ವಿನಾಯಕ ಬಡಾವಣೆಯಲ್ಲಿ ನೆಲಸಿತ್ತು.
ಅನ್‌ಲೈನ್ ಆಟದ ವ್ಯಸನಿಯಾಗಿದ್ದ ಸಹೋದರಿಯ ಪುತ್ರನನ್ನು ಕಳೆದ ಆಗಸ್ಟ್‌ನಲ್ಲಿ ಕೊಲೆ ಮಾಡಿದ್ದ ಆರೋಪಿ ನಾಗಪ್ರಸನ್ನ ಸೋಲದೇವನಹಳ್ಳಿ ಠಾಣೆಯ ಪೊಲೀಸರಿಗೆ ಶರಣಾಗಿದ್ದ. ಠಾಣಾ ವ್ಯಾಪ್ತಿಯ ಕುಂಬಾರಹಳ್ಳಿಯ ವಿನಾಯಕ ಬಡಾವಣೆಯಲ್ಲಿ ಕೃತ್ಯ ನಡೆದಿತ್ತು. ಬಾಲಕನ ಸಾವಿನ ಹಿನ್ನೆಲೆಯಲ್ಲಿ ಮನನೊಂದಿದ್ದ ಕುಟುಂಬಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.
‘ಮೃತದೇಹಗಳ ಪಕ್ಕದಲ್ಲಿ ನಿದ್ರೆಯ ಮಾತ್ರೆಗಳು ಸಿಕ್ಕಿವೆ’ ಎಂದು ಮೂಲಗಳು ಹೇಳಿವೆ.
ಬಾಲಕನ ಕತ್ತುಸೀಳಿ ಕೊಲೆ: ‘ಶಿಲ್ಪಾ ಅವರ ಪುತ್ರ ಅಮೋಘ ಕೀರ್ತಿ (14) ತನ್ನ ಮಾವ, ಆರೋಪಿ ನಾಗಪ್ರಸನ್ನ ಮನೆಯಲ್ಲಿ ಎಂಟು ತಿಂಗಳಿಂದ ನೆಲಸಿದ್ದ. ಮನೆಯಲ್ಲಿದ್ದಾಗ ಆನ್‌ಲೈನ್‌ನಲ್ಲಿ ಫ್ರೀಫೈರ್ ಆಟವಾಡುತ್ತಿದ್ದ. ಆನ್‌ಲೈನ್ ಆಟದ ವ್ಯಸನಿಯಾಗಿದ್ದ. ಆನ್‌ಲೈನ್‌ನಲ್ಲಿ ಆಟವಾಡದಂತೆ ನಾಗಪ್ರಸನ್ನ ಪದೇ ಪದೇ ಹೇಳುತ್ತಿದ್ದ. ಅಲ್ಲದೇ ಮಾವನ ಬಳಿ ಅಮೋಘ ಕೀರ್ತಿ ಹಣವನ್ನೂ ಕೇಳುತ್ತಿದ್ದ. ಸಹೋದರಿಯ ಪುತ್ರನ ವರ್ತನೆಯಿಂದ ಆರೋಪಿ ಬೇಸರಗೊಂಡಿದ್ದ. ಕಳೆದ ಆಗಸ್ಟ್ 7ರಂದು ರಾತ್ರಿ ನಿದ್ರೆಯಲ್ಲಿದ್ದ ಬಾಲಕನ ಕತ್ತುಸೀಳಿ ಕೊಲೆ ಮಾಡಿ ಆರೋಪಿ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.
ಆತ್ಮಹತ್ಯೆಗೂ ಯತ್ನಿಸಿದ್ದ ಆರೋಪಿ: ಕೃತ್ಯ ಎಸಗಿದ ಬಳಿಕ ಆತಂಕಕ್ಕೆ ಒಳಗಾದ ನಾಗಪ್ರಸನ್ನ ತಾನೂ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ. ನಂತರ, ಆತ್ಮಹತ್ಯೆ ಆಲೋಚನೆ ಬಿಟ್ಟು ಮೆಜೆಸ್ಟಿಕ್‌ಗೆ ತೆರಳಿ ಅಲ್ಲಿಂದ ಬೇರೆ ರಾಜ್ಯಕ್ಕೆ ಪರಾರಿಯಾಗಲು ಮುಂದಾಗಿದ್ದ. ಪ್ರಯಾಣಕ್ಕೆ ಹಣವಿಲ್ಲದೇ ಮೆಜೆಸ್ಟಿಕ್‌ನಲ್ಲೇ ನಾಲ್ಕು ದಿನ ಕಾಲ ಕಳೆದಿದ್ದ. ನಂತರ, ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದ.
‘ಸಹೋದರಿ ಶಿಲ್ಪಾ ಅವರೇ ನ್ಯಾಯಾಲಯಕ್ಕೆ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು. ಅದಾದ ಮೇಲೆ ಕುಟುಂಬಸ್ಥರು ದೇವಸ್ಥಾನಕ್ಕೆ ತೆರಳಿದ್ದರು. ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.