ಬೆಂಗಳೂರು: ಭಾರತಿ ಲೇಔಟ್‌ನ ಒಂದನೇ ಅಡ್ಡ ರಸ್ತೆಯಲ್ಲಿ ಏಪ್ರಿಲ್ 3ರಂದು ಯುವತಿಯ ಮೇಲೆ ನಡೆದಿದ್ದ ಲೈಂಗಿಕ ಕಿರುಕುಳದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ವ್ಯಕ್ತಿಯ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಭಾರತಿ ಲೇಔಟ್‌ನ ಒಂದನೇ ಅಡ್ಡ ರಸ್ತೆಯ ನಿವಾಸಿ ಲೋಕೇಶ್ ಗೌಡ (55) ಅವರ ವಿರುದ್ದ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66–‘ಇ’ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ಪೇಯಿಂಗ್ ಗೆಸ್ಟ್ ಒಂದರಲ್ಲಿ ನೆಲಸಿದ್ದ ಯುವತಿ ನೀಡಿದ ದೂರು ಆಧರಿಸಿ ಲೋಕೇಶ್ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
‘ಲೋಕೇಶ್ ಅವರನ್ನು ಇನ್ನೂ ಬಂಧಿಸಿಲ್ಲ. ವಿಚಾರಣೆಗೆ ಬರುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗುವುದು‘ ಎಂದು ಪೊಲೀಸರು ಹೇಳಿದರು.
ಏಪ್ರಿಲ್ 3ರಂದು ತಡರಾತ್ರಿ ಯುವತಿ ತನ್ನ ಸ್ನೇಹಿತೆಯ ಜತೆಗೆ ರಸ್ತೆಯಲ್ಲಿ ನಡೆದು ತೆರಳುತ್ತಿದ್ದರು. ಅದೇ ವೇಳೆ ಬೈಕ್‌ನಲ್ಲಿ ಬಂದಿದ್ದ ಆರೋಪಿ ಯುವತಿಯನ್ನು ತಬ್ಬಿಕೊಂಡು ಲೈಂಗಿಕ ಕಿರುಕುಳ ನೀಡಿ ಪರಾರಿ ಆಗಿದ್ದ. ಆ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಆ ದೃಶ್ಯವುಳ್ಳ ವಿಡಿಯೊ ತುಣುಕನ್ನು ಲೋಕೇಶ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಎಂಬ ಆರೋಪವಿದೆ.
ಲೈಂಗಿಕ ದೌರ್ಜನ್ಯ ಎಸಗಿದ್ದ ಆರೋಪಿ ಸಂತೋಷ್ ಡೇನಿಯಲ್ ಎಂಬಾತನನ್ನು ಕೇರಳದಲ್ಲಿ ಬಂಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.