ಬೆಂಗಳೂರು: ಮಲ್ಲೇಶ್ವರದ ಪೈಪ್‍ಲೈನ್ ರಸ್ತೆಯ ಅಡಿಗ ಪೀಠೋಪಕರಣ ಮಳಿಗೆಯಲ್ಲಿ ಗುರುವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿದ್ದು, ಪೀಠೋಪಕರಣಗಳು ಸುಟ್ಟು ಭಸ್ಮವಾಗಿವೆ.
ಅಂದಾಜು ₹3 ಕೋಟಿ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ ಎಂದು ಮಾಲೀಕರು ತಿಳಿಸಿದರು.
ಮಳಿಗೆಯು ಎರಡು ಅಂತಸ್ತಿನಲ್ಲಿದ್ದು, ನೆಲ ಮಾಳಿಗೆಯಲ್ಲಿ ರಾತ್ರಿ 2.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ವ್ಯಾಪಿಸುವುದಕ್ಕೂ ಮುನ್ನ ಮೊದಲ ಅಂತಸ್ತಿನಲ್ಲಿ ಮಲಗಿದ್ದ ನಾಲ್ಕು ಮಂದಿ ಕಾರ್ಮಿಕರು, ಹೊರಗೆ ಬಂದು ಪಾರಾಗಿದ್ದಾರೆ. ನಂತರ, ಬೆಂಕಿಯು ಇಡೀ ಮಳಿಗೆಗೆ ವ್ಯಾಪಿಸಿ, ಪೀಠೋಪಕರಣಗಳು ಹೊತ್ತಿ ಉರಿದಿವೆ.
ನಾಲ್ಕು ತಾಸು ಕಾರ್ಯಾಚರಣೆ: ಅಗ್ನಿಶಾಮಕ ಇಲಾಖೆಯ 13 ವಾಹನಗಳನ್ನು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಬಳಕೆ ಮಾಡಿಕೊಳ್ಳಲಾಯಿತು. ಸಿಬ್ಬಂದಿಯು ನಾಲ್ಕು ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.
ಅಡಿಗ ಮಳಿಗೆಯಲ್ಲಿ ಪೂಜಾ ಮಂಟಪಗಳು ಹಾಗೂ ಪೀಠೋಪಕರಣಗಳನ್ನು ತಯಾರಿಸಿ ಮಾರಾಟ ಮಾಡಲಾಗುತ್ತದೆ. ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಅವಘಡ ಸಂಭವಿಸಿರುವಂತೆ ಕಾಣಿಸುತ್ತಿದೆ. ಅಗ್ನಿಶಾಮಕ ಸಿಬ್ಬಂದಿಯು ಪರಿಶೀಲನೆ ಮಾಡಿ ವರದಿ ನೀಡಿದ ಬಳಿಕ ಅವಘಡಕ್ಕೆ ನಿಖರ ಕಾರಣ ಏನು ಎಂಬುದು ಗೊತ್ತಾಗಲಿದೆ ಎಂದು ಪೊಲೀಸರು ಹೇಳಿದರು.
ವೈಯಾಲಿಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.