ಬೆಂಗಳೂರು: ಬನಶಂಕರಿ 6ನೇ ಹಂತದ 11ನೇ ಬ್ಲಾಕ್‌ನಲ್ಲಿರುವ ಉದ್ಯಾನ–1ರಲ್ಲಿ ರಾಜಕಾಲುವೆ ಒತ್ತುವರಿಯಾಗಿದ್ದು, ಪಾರ್ಕ್ ಜಾಗವನ್ನೂ ಖಾಸಗಿಯವರು ಒತ್ತುವರಿ ಮಾಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದವರು ಬಿಟ್ಟಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಾಗರಿಕರು ಬುಧವಾರ ಪ್ರತಿಭಟನೆ ಮಾಡಿದರು.
‘ಉದ್ಯಾನದ ಪಕ್ಕವಿರುವ ರಾಜಕಾಲುವೆಯನ್ನು ಕಲ್ಲು–ಮಣ್ಣಿನಿಂದ ಮುಚ್ಚಲಾಗಿದೆ. ಅಷ್ಟೇ ಅಲ್ಲ, ಉದ್ಯಾನಕ್ಕೆ ಸೇರಿದ ಸುಮಾರು ಒಂದು ಎಕರೆ ಪ್ರದೇಶವನ್ನು ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಬಿಡಿಎ ಅಧಿಕಾರಿಗಳಿಗೆ ದೂರು ನೀಡಿದ್ದರೂ ಅವರು ಕ್ರಮ ಕೈಗೊಂಡಿಲ್ಲ. ಬಿಡಿಎ ಆಯುಕ್ತರು ಈ ಬಗ್ಗೆ ಗಮನಹರಿಸಿ ಉದ್ಯಾನವನ್ನು ಉಳಿಸಿಕೊಡಬೇಕು’ ಎಂದು ಆಗ್ರಹಿಸಿದರು.
‘ನಾಗರಿಕರೆಲ್ಲ ಸೇರಿಕೊಂಡು ಉದ್ಯಾನವನ್ನು ಅಭಿವೃದ್ಧಿ ಮಾಡಿದ್ದೆವು. ನಂತರ ಬಿಡಿಎದವರು ಅಭಿವೃದ್ಧಿ ಮಾಡಿದರು. ಇದೀಗ ಉದ್ಯಾನದ ಜಾಗವನ್ನು ಖಾಸಗಿಯವರಿಗೆ ನೀಡಲು ಗುರುತು ಮಾಡಲು ಬುಧವಾರ ಬಿಡಿಎ ಅಧಿಕಾರಿಗಳು, ಎಂಜಿನಿಯರ್‌ಗಳು ಬಂದಿದ್ದರು. ಖಾಸಗಿಯವರಿಗೆ ಅನುಕೂಲ ಮಾಡಿಕೊಡಲು, ಸರ್ಕಾರಿ ಉದ್ಯಾನ ಹಾಗೂ ರಾಜಕಾಲುವೆಯನ್ನೂ ಅವರಿಗೆ ಕೊಡಲು ಮುಂದಾಗಿದ್ದಾರೆ. ಆಯುಕ್ತರು ಈ ಬಗ್ಗೆ ಗಮನವಹಿಸಬೇಕು. ರಾಜಕಾಲುವೆ ಒತ್ತುವರಿಯನ್ನು ಕೂಡಲೇ ತೆರವು ಮಾಡಬೇಕು. ಉದ್ಯಾನವನ್ನು ಖಾಸಗಿಯವರಿಗೆ ನೀಡಬಾರದು. ಅದಕ್ಕೆ ನಾವು ಬಿಡುವುದಿಲ್ಲ’ ಎಂದು ಸ್ಥಳೀಯರಾದ ಡಾ. ಸೋಮಶೇಖರ ಮೂರ್ತಿ, ಡಾ. ಮಹದೇವ್ ಹಾಗೂ ಗೋಪಾಲ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.