ADVERTISEMENT

ಆಹಾರ ಸುರಕ್ಷತೆ: ಬೀದಿ ಬದಿಯ 406 ಮಾರಾಟಗಾರರಿಗೆ ನೋಟಿಸ್

ಆಹಾರದ ಗುಣಮಟ್ಟದ ಬಗ್ಗೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 15:16 IST
Last Updated 11 ಜುಲೈ 2025, 15:16 IST
<div class="paragraphs"><p>ಬೀದಿ ಬದಿ ವ್ಯಾಪಾರ</p></div>

ಬೀದಿ ಬದಿ ವ್ಯಾಪಾರ

   

ಸಾಂದರ್ಭಿಕ ಚಿತ್ರ

ಬೆಂಗಳೂರು: ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಜೂನ್ ತಿಂಗಳಲ್ಲಿ ರಾಜ್ಯದಾದ್ಯಂತ 1,557 ಬೀದಿ ಬದಿ ಆಹಾರ ಮಾರಾಟ ಘಟಕಗಳನ್ನು ಪರಿಶೀಲಿಸಿದ್ದಾರೆ. ಕಳಪೆ ಗುಣಮಟ್ಟದ ಆಹಾರ ವಿತರಣೆ ಹಾಗೂ ಶುಚಿತ್ವ ಕಾಯ್ದುಕೊಳ್ಳದ 406 ಮಾರಾಟಗಾರರಿಗೆ ನೋಟಿಸ್ ನೀಡಿದ್ದಾರೆ. 

ADVERTISEMENT

ಜೂನ್ 7 ರಂದು ವಿಶ್ವ ಆಹಾರ ಸುರಕ್ಷತಾ ದಿನ ಇದ್ದ ಕಾರಣ, ಇಡೀ ತಿಂಗಳು ಬೀದಿ ಬದಿ ಹಾಗೂ ಹೋಟೆಲ್‌ಗಳಲ್ಲಿನ ಆಹಾರದ ಗುಣಮಟ್ಟವನ್ನು ಪರೀಕ್ಷಿಸಲಾಗಿದೆ. 

ಬೀದಿ ಬದಿ ಆಹಾರದ ಮಾರಾಟಕ್ಕೆ ಸಂಬಂಧಿಸಿದಂತೆ ಗುಣಮಟ್ಟ, ನೈರ್ಮಲ್ಯ ಕಾಯ್ದುಕೊಳ್ಳದ ಮಾರಾಟಗಾರರಿಗೆ ಒಟ್ಟು ₹ 44,500 ದಂಡ ವಿಧಿಸಲಾಗಿದೆ. ಇದೇ ವೇಳೆ 866 ಬೀದಿ ಬದಿ ಆಹಾರ ಮಾರಾಟ ಘಟಕಗಳಿಗೆ ಇಲಾಖೆಯಡಿ ಉಚಿತ ನೋಂದಣಿಯನ್ನು ಒದಗಿಸಲಾಗಿದೆ. ಆಹಾರದ ಗುಣಮಟ್ಟ ಕಾಯ್ದುಕೊಳ್ಳುವಿಕೆ, ಕೌಶಲ ವೃದ್ಧಿಗೆ ಸಂಬಂಧಿಸಿದಂತೆ 1,240 ಬೀದಿ ಬದಿ ಆಹಾರ ಮಾರಾಟಗಾರರಿಗೆ ತರಬೇತಿ ನೀಡಲಾಗಿದೆ’ ಎಂದು ಇಲಾಖೆ ಆಯುಕ್ತರು ತಿಳಿಸಿದ್ದಾರೆ.

‘ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2005ರ ಅಡಿ ರಾಜ್ಯದಾದ್ಯಂತ 184 ಬಸ್ ನಿಲ್ದಾಣಗಳಲ್ಲಿ, 871 ಆಹಾರ ಮಳಿಗೆಗಳನ್ನು ಪರಿಶೀಲನೆ ನಡೆಸಲಾಗಿದೆ. ನಿಗದಿತ ಮಾನದಂಡ ಪಾಲಿಸದ 216 ಮಳಿಗೆಗಳಿಗೆ ನೋಟಿಸ್ ನೀಡಿದ್ದು, ₹55 ಸಾವಿರ ದಂಡ ವಿಧಿಸಲಾಗಿದೆ. 95 ಆಹಾರ ಮಾದರಿಗಳನ್ನು ವಿಶ್ಲೇಷಣೆ ನಡೆಸಲು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಹೇಳಿದ್ದಾರೆ. 

ಹೋಟೆಲ್ ಪರಿಶೀಲನೆ: ‘ಆಹಾರ ಸುರಕ್ಷತೆ, ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ರಾಜ್ಯದಾದ್ಯಂತ 720 ಹೋಟೆಲ್/ರೆಸ್ಟೋರೆಂಟ್‌ಗಳನ್ನು ಪರಿಶೀಲಿಸಲಾಗಿದೆ. ಇವುಗಳಲ್ಲಿ ಗುಣಮಟ್ಟ ಮತ್ತು ನೈರ್ಮಲ್ಯಕ್ಕೆ ಆದ್ಯತೆ ನೀಡದ 183 ಹೋಟೆಲ್‌ಗಳಿಗೆ ನೋಟಿಸ್‌ ನೀಡಿ, ಒಟ್ಟು ₹21,500 ದಂಡ ವಿಧಿಸಲಾಗಿದೆ. 234 ಕುಡಿಯುವ ನೀರಿನ ಮಾದರಿಗಳನ್ನು ಸಂಗ್ರಹಿಸಿ, ವಿಶ್ಲೇಷಣೆ ನಡೆಸಲು ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ರಾಜ್ಯದಾದ್ಯಂತ 604 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, 541 ಅಹಾರ ಮಾದರಿಗಳನ್ನು ವಿಶ್ಲೇಷಣೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆಹಾರ ಮಾದರಿಗಳ ವಿಶ್ಲೇಷಣಾ ಫಲಿತಾಂಶಗಳ ಅನ್ವಯ ಕಾನೂನಾತ್ಮಕ ಕ್ರಮಗಳನ್ನು ಜರುಗಿಸಲಾಗುವುದು’ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.