ಬೆಂಗಳೂರು: ವಿದ್ಯಾರಣ್ಯ ಯುವಕ ಸಂಘವು ಆಗಸ್ಟ್ 27ರಿಂದ ಸೆಪ್ಟೆಂಬರ್ 6ರವರೆಗೆ 63ನೇ ವರ್ಷದ ಬೆಂಗಳೂರು ಗಣೇಶ ಉತ್ಸವ ಹಮ್ಮಿಕೊಂಡಿದ್ದು, ಹನ್ನೊಂದು ದಿನಗಳ ಕಾರ್ಯಕ್ರಮದಲ್ಲಿ 50ಕ್ಕೂ ಅಧಿಕ ಕಲಾವಿದರು ಪಾಲ್ಗೊಳ್ಳಲಿದ್ದಾರೆ.
ಎರಡು ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಎಪಿಎಸ್ ಕಾಲೇಜು ಮೈದಾನ ಹಾಗೂ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಉತ್ಸವದಲ್ಲಿ ಎಂ.ಡಿ.ಪಲ್ಲವಿ, ಲಕ್ಷ್ಮಿ ನಾಗರಾಜ್, ಇಂದು ನಾಗರಾಜ್, ಸೂರ್ಯಗಾಯತ್ರಿ, ಸುನೀತಾ ಉಪದೃಷ್ಟ, ವೆಂಕಟೇಶ ಕುಮಾರ್, ವಿನಯ್ ವಾರಾಣಸಿ, ಗಂಗಾ ಶಶಿಧರನ್ ಮೊದಲಾದ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಎಲ್ಲ ದಿನಗಳು ಸಂಜೆ ಭಕ್ತಿ ಸಂಗೀತದ ಜತೆಗೆ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬೆಂಗಳೂರು ಗಣೇಶ ಉತ್ಸವ ಸಮಿತಿಯ ವ್ಯವಸ್ಥಾಪಕ ಟ್ರಸ್ಟಿ ನಂದೀಶ್ ಎಸ್.ಎಂ. ತಿಳಿಸಿದ್ದಾರೆ.
ಚಿತ್ರರಂಗದ ರವಿಚಂದ್ರನ್, ಮಯೂರ ರಾಘವೇಂದ್ರ ಅವರು ಪ್ರೇಕ್ಷಕರ ಜತೆಗೆ ಸಂವಾದ ನಡೆಸಲಿದ್ದಾರೆ. ಮಂಜು ಡ್ರಮ್ಸ್ ಕಲೆಕ್ಟಿವ್‌ನಿಂದ ಸಂಗೀತ ಕಛೇರಿ ಇರಲಿದೆ. ವಿಜಯ್ ಪ್ರಕಾಶ್, ರಘು ದೀಕ್ಷಿತ್, ಎಂ.ಡಿ. ಪಲ್ಲವಿ, ರಾಜೇಶ್ ಕೃಷ್ಣನ್, ಪ್ರವೀಣ್ ಗೋಡ್ಖಿಂಡಿ, ವಿಜಯ್ ಯೇಸುದಾಸ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಪಂಡಿತ್ ಜಗದೀಶ್ ಡಿ. ಕುರ್ತಕೋಟಿ ಹಾಗೂ ತಂಡದಿಂದ ‘ಕಾಶಿ ಡಮರು’, ಸವಿತಕ್ಕ ಹಳ್ಳಿ ಬ್ಯಾಂಡ್‌ನಿಂದ ‘ಭಕ್ತಿ ಜಾನಪದ ಸಂಗೀತ’ ಹಾಗೂ ವಿನಯ್ ವಾರಾಣಸಿ ಅವರಿಂದ ‘ಗಜಮುಖಮ್’ ನೃತ್ಯರೂಪಕ ಆಯೋಜಿಸಲಾಗಿದೆ. ಆ.31ರಂದು ಸಾವಿರಾರು ಮಹಿಳೆಯರಿಂದ ಏಕಕಾಲಕ್ಕೆ ಗಣೇಶ ಪಂಚರತ್ನ ಶ್ಲೋಕಗಳನ್ನು ಪಠಿಸುತ್ತಾ, ಎಪಿಎಸ್ ಕಾಲೇಜಿನಿಂದ ಗಾಂಧಿ ಬಜಾರ್ ವೃತ್ತದವರೆಗೆ ಮೆರವಣಿಗೆ ನಡೆಯಲಿದೆ ಎಂದು ಹೇಳಿದ್ದಾರೆ.
ಆಹಾರ ಪ್ರಿಯರಿಗೆ ‘ಅರೋಮಾಸ್ ಆಫ್ ಕರ್ನಾಟಕ’ ಆಹಾರೋತ್ಸವ ಹಮ್ಮಿಕೊಳ್ಳಲಾಗಿದೆ. ಈ ವರ್ಷವೂ ಗಣೇಶೋತ್ಸವವು ಪ್ಲಾಸ್ಟಿಕ್ ಮುಕ್ತವಾಗಿರಲಿದೆ. ಗಣೇಶ ಮಂಟಪವನ್ನು ಮಣ್ಣಿನಲ್ಲಿ ಕರಗುವ ವಸ್ತುಗಳಿಂದಲೇ ನಿರ್ಮಿಸಲಾಗುತ್ತದೆ. ಸೆ.6ರಂದು ಗಣಪತಿ ವಿಸರ್ಜನೆಯ ಮೆರವಣಿಗೆ ನಡೆಯಲಿದೆ. ಗಣೇಶೋತ್ಸವದ ಎಲ್ಲ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.