
ಬೆಂಗಳೂರು: ಯಲಹಂಕದ ಚೌಡೇಶ್ವರಿ ಲೇಔಟ್‍ನ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿಕೊಂಡು ಸಂಭವಿಸಿದ ಸ್ಫೋಟದಿಂದ ದಂಪತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಚೌಡೇಶ್ವರಿ ಲೇಔಟ್ ನಿವಾಸಿ ರಾಜಶೇಖರ್ ಹಾಗೂ ಅವರ ಪತ್ನಿ ಕೃಷ್ಣವೇಣಿ ಗಾಯಗೊಂಡವರು. ಚಿಕ್ಕಬಳ್ಳಾಪುರ ಜಿಲ್ಲೆಯ ರಾಜಶೇಖರ್ ದಂಪತಿ ನೇಯ್ಗೆ ಕೆಲಸ ಮಾಡುತ್ತಾರೆ.
ರಾಜಶೇಖರ್ ಮತ್ತು ಕೃಷ್ಣವೇಣಿ ಮೂರು ತಿಂಗಳ ಹಿಂದಷ್ಟೇ ಆಂಧ್ರಪ್ರದೇಶದ ದೇವಸ್ಥಾನದಲ್ಲಿ ಮದುವೆಯಾಗಿದ್ದರು. ನಾಲ್ಕೈದು ದಿನಗಳ ಹಿಂದಷ್ಟೇ ಚೌಡೇಶ್ವರಿನಗರಕ್ಕೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆ ಸಮೀಪದಲ್ಲೇ ಕೈಮಗ್ಗ ಕಾರ್ಖಾನೆಯಲ್ಲಿ ದಂಪತಿ ಕೆಲಸ ಮಾಡುತ್ತಿದ್ದರು.
ಕೃಷ್ಣವೇಣಿ, ಶನಿವಾರ ರಾತ್ರಿ ಅಡುಗೆ ಮಾಡಿದ ನಂತರ ಗ್ಯಾಸ್ ಸಿಲಿಂಡರ್‌ನ ರೆಗ್ಯೂಲೇಟರ್ ಅನ್ನು ಸರಿಯಾಗಿ ಬಂದ್ ಮಾಡಿರಲಿಲ್ಲ. ಹೀಗಾಗಿ, ಸಿಲಿಂಡರ್‌ನಿಂದ ರಾತ್ರಿಯಿಡೀ ಅಡುಗೆ ಅನಿಲ ಸೋರಿಕೆಯಾಗಿತ್ತು. ಭಾನುವಾರ ಬೆಳಗಿನ ಜಾವ ಕೃಷ್ಣವೇಣಿ, ಟೀ ಮಾಡಲು ಅಡುಗೆ ಕೋಣೆಗೆ ಹೋಗಿ ವಿದ್ಯುತ್ ದೀಪದ (ಲೈಟ್) ಸ್ವಿಚ್ ಹಾಕುತ್ತಿದ್ದಂತೆ ಬೆಂಕಿ ಹೊತ್ತಿಕೊಂಡು ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದ ತೀವ್ರತೆಗೆ ಕೃಷ್ಣವೇಣಿ ಹಾಗೂ ರಾಜಶೇಖರ್ ಗಾಯಗೊಂಡಿದ್ದಾರೆ. ದಂಪತಿಯನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೃಷ್ಣವೇಣಿಗೆ ತೀವ್ರ ಸುಟ್ಟ ಗಾಯಗಳಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.
ಸ್ಫೋಟದ ತೀವ್ರತೆಗೆ ರಾಜಶೇಖರ್ ಅವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲದೆ, ಕಿಟಿಕಿ ಬಾಗಿಲುಗಳಿಗೆ ಹಾನಿಯಾಗಿದೆ. ಮನೆಯಲ್ಲಿನ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ವಸ್ತುಗಳು ಛಿದ್ರವಾಗಿವೆ. ಅಕ್ಕಪಕ್ಕದ ಮನೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.