ADVERTISEMENT

ಬೆಂಗಳೂರು ಆಡಳಿತ: ಮುನಿಸಿಪಲ್‌ ಬೋರ್ಡ್‌ನಿಂದ ನಗರ ಪಾಲಿಕೆವರೆಗೆ..

18 ಸದಸ್ಯರಿಂದ 198 ಕಾರ್ಪೊರೇಟರ್‌ಗಳವರೆಗೆ ಬೆಂಗಳೂರು ಆಡಳಿತ

ಆರ್. ಮಂಜುನಾಥ್
Published 2 ಸೆಪ್ಟೆಂಬರ್ 2025, 23:30 IST
Last Updated 2 ಸೆಪ್ಟೆಂಬರ್ 2025, 23:30 IST
   

ಬೆಂಗಳೂರು: ನಗರದ ಆಡಳಿತ 1862ರಲ್ಲಿ 18 ಸದಸ್ಯರಿಂದ ಆರಂಭವಾಗಿ, 2010ರಲ್ಲಿ 198 ಕಾರ್ಪೊರೇಟರ್‌ಗಳನ್ನು ಹೊಂದುವವರೆಗೂ ನಾಲ್ಕು ಬಾರಿ ತನ್ನ ‘ಆಡಳಿತ ವಿನ್ಯಾಸ’ವನ್ನು ಬದಲಿಸಿಕೊಂಡಿದೆ.

ನಗರ ಆಡಳಿತಕ್ಕೇ ಪ್ರತ್ಯೇಕವಾದ ಬೋರ್ಡ್‌ ರಚನೆಯಾಗಿ 142 ವರ್ಷಗಳಾಗುತ್ತಿದ್ದು, ಎರಡು ಮುನಿಸಿಪಲ್‌ ಬೋರ್ಡ್‌ನಿಂದ ಆರಂಭವಾಗಿ, 198 ವಾರ್ಡ್‌ಗಳ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಾಗಿ, ಇದೀಗ ಐದು ನಗರ ಪಾಲಿಕೆಗಳಿಗೆ ನಗರದ ಆಡಳಿತ ಹಂಚಿಕೆಯಾಗಿದೆ.

1862ರ ಮಾರ್ಚ್‌ 27ರಂದು ಬೆಂಗಳೂರಿನಲ್ಲಿ ಸ್ಥಳೀಯ ಆಡಳಿತ ಪ್ರಾಯೋಗಿಕವಾಗಿ ಜಾರಿಗೆ ಬಂದಿತ್ತು. ಬ್ರಿಟನ್‌ ಮಾದರಿಯಲ್ಲಿ ಅಂದಿನ ಮೈಸೂರಿನ ಆಯುಕ್ತ ಬೌರಿಂಗ್ ಅವರು 1850 ಕಾಯ್ದೆಯನ್ವಯ ಬೆಂಗಳೂರಿನಲ್ಲಿ ಮುನಿಸಿಪಲ್ ಬೋರ್ಡ್ ರಚಿಸಿದರು. ನಾಲ್ಕು ತಿಂಗಳ ನಂತರ 1862ರ ಆಗಸ್ಟ್ 1ರಂದು ಬೆಂಗಳೂರು ಮುನಿಸಿಪಲ್ ಬೋರ್ಡ್ ಹಾಗೂ ಮುನಿಸಿಪಲ್ ಕಂಟೋನ್ಮೆಂಟ್ ಬೋರ್ಡ್ (ದಂಡುಪ್ರದೇಶ) ಎಂದು ರಚಿಸಲಾಯಿತು.

ADVERTISEMENT

ಮುನಿಸಿಪಲ್‌ ಬೋರ್ಡ್‌ನಲ್ಲಿ ಒಂಬತ್ತು ಅಧಿಕಾರಿಗಳನ್ನು ಸರ್ಕಾರ ನಾಮನಿರ್ದೇಶನ ಮಾಡಿತ್ತು. ದಂಡು ಪ್ರದೇಶ ಬೋರ್ಡ್‌ನಲ್ಲಿ ತಲಾ ಆರು ಅಧಿಕಾರಿಗಳು ಹಾಗೂ ಸೈನ್ಯಾಧಿಕಾರಿಗಳು ಸದಸ್ಯರಾಗಿದ್ದರು. ಎರಡೂ ಬೋರ್ಡ್‌ಗಳು ಪ್ರತ್ಯೇಕವಾಗಿ ತಮ್ಮ ವ್ಯಾಪ್ತಿಯಲ್ಲಿ ನೈರ್ಮಲ್ಯ, ತೆರಿಗೆ, ಪೊಲೀಸ್ ಹಾಗೂ ಲೆಕ್ಕಪತ್ರದ ನಿರ್ವಹಣೆ ಮಾಡುತ್ತಿದ್ದವು.

ಎರಡು ಬೋರ್ಡ್‌ಗಳಿಗೆ 1883ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದು, 18 ಸದಸ್ಯರು ಚುನಾಯಿತರಾದರು. ಅಧಿಕಾರಿಗಳೇ ಕಾರ್ಯ ನಿಯಂತ್ರಣ ಹೊಂದಿದ್ದರು. ಬೆಂಗಳೂರು ಮುನಿಸಿಪಲ್ ಬೋರ್ಡ್‌ಗೆ 1897ರಲ್ಲಿ ಸರ್ಕಾರದ ಪ್ರತಿನಿಧಿಯಾದ ಅರ್ಕಾಡ್ ಶ್ರೀನಿವಾಸ ಚಾರ್ಯ ಮೊದಲ ಅಧ್ಯಕ್ಷರಾದರು. ಅಧಿಕಾರೇತರ ಸದಸ್ಯರಾದ ಪುಟ್ಟಣ್ಣಶೆಟ್ಟಿ ಅವರು 1913ರಲ್ಲಿ ಅಧ್ಯಕ್ಷರಾದರು. ಮುನಿಸಿಪಲ್ ಕಂಟೋನ್ಮೆಂಟ್ ಬೋರ್ಡ್‌ನಲ್ಲಿ ಅಧಿಕಾರಿಗಳೇ ಇದ್ದರು.

ದಂಡುಪ್ರದೇಶ ಹಾಗೂ ಬೆಂಗಳೂರು ಮುನಿಸಿಪಲ್ ಬೋರ್ಡ್‌ಗಳನ್ನು 1949ರಲ್ಲಿ ಸಿಟಿ ಕಾರ್ಪೊರೇಷನ್ ಕಾಯ್ದೆಯನ್ವಯ ವಿಲೀನಗೊಳಿಸಿ, ‘ಬೆಂಗಳೂರು ಸಿಟಿ ಕಾರ್ಪೊರೇಷನ್’ (ಬೆಂಗಳೂರು ನಗರ ಸಭೆ– ಬಿಸಿಸಿ) ಎಂದು ಹೆಸರಿಸಲಾಯಿತು. ಆರ್. ಸುಬ್ಬಣ್ಣ ಪ್ರಥಮ ಮೇಯರ್ ಹಾಗೂ ವಿ.ಪಿ. ದೀನದಯಾಳು ನಾಯ್ಡು ಪ್ರಥಮ ಉಪಮೇಯರ್ ಆದರು. 1951ರಲ್ಲಿ ಬಿಸಿಸಿಗೆ ಚುನಾವಣೆ ನಡೆದು, 69 ಸದಸ್ಯರು ಆಯ್ಕೆಯಾದರು. ಆರು ಜನರು ನಾಮಕರಣ ಸದಸ್ಯರಿದ್ದರು. ಐದು ಸ್ಥಾಯಿ ಸಮಿತಿಗಳೂ ಅಸ್ತಿತ್ವಕ್ಕೆ ಬಂದವು.

1971ರ ಚುನಾವಣೆವರೆಗೂ  ಬೆಂಗಳೂರು ನಗರ ಸಭೆಯ ಒಟ್ಟಾರೆ ಸದಸ್ಯರ ಸಂಖ್ಯೆ 75 (ನಾಮಕರಣ ಸದಸ್ಯರು ಸೇರಿ) ಆಗಿತ್ತು. 1983ರಲ್ಲಿ 87 ವಾರ್ಡ್‌ಗಳನ್ನಾಗಿ ವಿಂಗಡಿಸಲಾಯಿತು. 1996ರಲ್ಲಿ 100 ವಾರ್ಡ್‌ಗಳಿಗೆ ವಿಸ್ತರಣೆ ಮಾಡಿ, ‘ಬೆಂಗಳೂರು ಮಹಾನಗರ ಪಾಲಿಕೆ’ (ಬಿಎಂಪಿ) ಅಸ್ತಿತ್ವಕ್ಕೆ ಬಂದಿತು. 2007ರಲ್ಲಿ ನಗರದ ಸುತ್ತಮತ್ತಲಿನ ಏಳು ನಗರ ಸಭೆ ಹಾಗೂ ಒಂದು ಪುರಸಭೆ ಮತ್ತು 110 ಹಳ್ಳಿಗಳು ಸೇರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಾಗಿ (ಬಿಬಿಎಂಪಿ) ರಚಿಸಿ, 198 ವಾರ್ಡ್‌ಗಳನ್ನು ವಿಂಗಡಿಸಲಾಯಿತು. 2010ರಲ್ಲಿ ಬಿಬಿಎಂಪಿಗೆ ಚುನಾವಣೆ ನಡೆದಿತ್ತು.

2020ರ ಸೆಪ್ಟೆಂಬರ್ 10ರಂದು ಕೌನ್ಸಿಲ್‌ ಅವಧಿ ಮುಕ್ತಾಯಗೊಂಡಿತ್ತು. 2022ರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 243 ವಾರ್ಡ್‌ಗಳನ್ನು ಸರ್ಕಾರ ರಚಿಸಿತ್ತು. 2023ರ ಆಗಸ್ಟ್‌ನಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲೇ 225 ವಾರ್ಡ್‌ಗಳಿಗೆ ಮರು ವಿಂಗಡಣೆ ಮಾಡಲಾಗಿತ್ತು. 2025ರ ಸೆಪ್ಟೆಂಬರ್‌ 2ರಂದು ಬಿಬಿಎಂಪಿ ಅಸ್ತಿತ್ವ ಕಳೆದುಕೊಂಡು, ಅದೇ ವ್ಯಾಪ್ತಿಯಲ್ಲಿ ‘ಗ್ರೇಟರ್‌ ಬೆಂಗಳೂರು’ ಅಸ್ತಿತ್ವ ಕಂಡುಕೊಂಡು, ಐದು ನಗರ ಪಾಲಿಕೆಗಳೂ ರಚನೆಯಾಗಿವೆ.

ಬಿಬಿಎಂಪಿ ಕೇಂದ್ರ ಕಚೇರಿ ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.