ADVERTISEMENT

ಗೋವಿಂದರಾಜನಗರದಲ್ಲಿ ಸೂಪರ್‌ಸ್ಪೆಷಾಲಿಟಿ ಸೌಲಭ್ಯ: ಆಸ್ಪತ್ರೆಗೆ ₹49 ಕೋಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2022, 20:18 IST
Last Updated 17 ಏಪ್ರಿಲ್ 2022, 20:18 IST
   

ಬೆಂಗಳೂರು: ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಅಗ್ರಹಾರ ದಾಸರಹಳ್ಳಿಯಲ್ಲಿ ನಿರ್ಮಿಸುತ್ತಿರುವ 200 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೇರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ₹ 49 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಿದೆ.

ಬಿಬಿಎಂಪಿಯು ₹ 60 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆಯ ಕಟ್ಟಡವನ್ನು ಮೂರು ಹಂತಗಳಲ್ಲಿ ನಿರ್ಮಿಸಿದ್ದು, ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಮೊದಲ ಹಂತದಲ್ಲಿ ತಳಮಹಡಿ, ನೆಲಮಹಡಿ, ಒಂದು, ಎರಡು ಮತ್ತು ಮೂರನೇ ಮಹಡಿ ಮಹಡಿಗಳನ್ನು ನಿರ್ಮಿಸಲಾಗಿದೆ. ಎರಡನೇ ಹಂತದಲ್ಲಿ ನಾಲ್ಕನೇ ಮಹಡಿ ನಿರ್ಮಿಸಲಾಗಿದೆ. ಮೂರನೇ ಹಂತದಲ್ಲಿ ಆವರಣ ಗೋಡೆ, ಸಂಪ್‌, ಟ್ಯಾಂಕ್‌ ಹಾಗೂ ಕಟ್ಟಡಕ್ಕೆ ಸಂಪರ್ಕ ರಸ್ತೆಗಳ
ನಿರ್ಮಿಸಲಾಗುತ್ತಿದೆ.

ಒಳಾಂಗಣ ಅಭಿವೃದ್ಧಿ, ಅಗ್ನಿಶಾಮಕ ವ್ಯವಸ್ಥೆ, ಮಾಡ್ಯುಲಾರ್‌ ಶಸ್ತ್ರಚಿಕಿತ್ಸಾ ಕೊಠಡಿ (ಒ.ಟಿ), ವೈದ್ಯಕೀಯ ಅನಿಲ ಕೊಳವೆ, ತಾಪನಿಯಂತ್ರಣ ಮತ್ತು ವಾತಾಯನ ವ್ಯವಸ್ಥೆ (ಎಚ್‌ವಿಎಸಿ), ಸಿ.ಸಿ.ಕ್ಯಾಮೆರಾ ವ್ಯವಸ್ಥೆ ಅಳವಡಿಕೆ, 30 ಹಾಸಿಗೆಗಳ ಸಾಮರ್ಥ್ಯದ ತೀವ್ರ ನಿಗಾ ಘಟಕ (ಐಸಿಯು), ಸಂದೇಶ ಫಲಕಗಳ ಅಳವಡಿಕೆ ಕಾರ್ಯಗಳು ಬಾಕಿ ಇವೆ. ಪೀಠೋಪಕರಣ, ವೈದ್ಯಕೀಯ ಉಪಕರಣ, ಆಂಬುಲೆನ್ಸ್ ಹಾಗೂ ಚಿರಶಾಂತಿ ವಾಹನಗಳನ್ನು ಇನ್ನಷ್ಟೇ ಖರೀದಿಸಬೇಕಿದೆ.

ADVERTISEMENT

ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಕರ್ಯಗಳನ್ನು ಕಲ್ಪಿಸುವುದಕ್ಕೆ ಅನುದಾನದ ಕೊರತೆ ಎದುರಾಗಿತ್ತು. ಬಾಕಿ ಇರುವ ಸಿವಿಲ್‌ ಕಾಮಗಾರಿಗಳನ್ನು ಪೂರ್ತಿಗೊಳಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣಇಲಾಖೆ ಅನುದಾನ ಒದಗಿಸಬೇಕು ಎಂಬುದು ಬಿಬಿಎಂಪಿ ಬೇಡಿಕೆ. ಆಸ್ಪತ್ರೆಯಲ್ಲಿ ಸೂಪರ್‌ ಸ್ಪೆಷಾಲಿಟಿ ಸೌಕರ್ಯ ಕಲ್ಪಿಸಲು ಅಗತ್ಯ ಅನುದಾನ ಒದಗಿಸುವಂತೆ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಅವರು ಕೂಡಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯನ್ನು
ಕೋರಿದ್ದರು.

ಇಲ್ಲಿ ಬಾಕಿ ಇರುವ ಸಿವಿಲ್ ಕಾಮಗಾರಿಗಳನ್ನು ಪೂರ್ಣಗೊಳಿಸಲು, ಮೂಲಸೌಕರ್ಯ ಕಲ್ಪಿಸಲು, ವೈದ್ಯಕೀಯ ಉಪಕರಣಗಳ ಖರೀದಿಸಲು ₹ 49 ಕೋಟಿ ಅನುದಾನದ ಅಗತ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ಅವರು ಪ್ರಸ್ತಾವ ಸಿದ್ಧಪಡಿಸಿದ್ದಾರೆ.

ಸಿವಿಲ್‌ ಹಾಗೂ ಮೂಲಸೌಕರ್ಯ ಕಾಮಗಾರಿಗಳಿಗೆ ₹ 22.70 ಕೋಟಿ ಹಾಗೂ ವೈದ್ಯಕೀಯ ಉಪಕರಣಗಳ ಖರೀದಿಗೆ ₹ 25.57 ಕೋಟಿ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. 2018–19ನೇ ಸಾಲಿನ ಲೋಕೋಪಯೋಗಿ ಇಲಾಖೆಯ ದರಪಟ್ಟಿ ಹಾಗೂ 2019–20ನೇ ಸಾಲಿನ ವಿದ್ಯುತ್‌ ದರಪಟ್ಟಿ ಪ್ರಕಾರ ಈ ಪ್ರಸ್ತಾವ ಸಿದ್ಧಪಡಿಸಲಾಗಿದೆ. ಇದಕ್ಕೆ ಯಾವುದೇ ಲೆಕ್ಕಶೀರ್ಷಿಕೆಯಲ್ಲಿ ಅನುದಾನ ಕಾಯ್ದಿರಿಸಿಲ್ಲ. ಹಾಗಾಗಿ ₹ 49 ಕೋಟಿ ಮೊತ್ತದ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು ಎಂದು ಆರೋಗ್ಯ ಇಲಾಖೆ ಆಯುಕ್ತರು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರಿಗೆ ಇತ್ತೀಚೆಗೆ ಪ್ರಸ್ತಾವ
ಸಲ್ಲಿಸಿದ್ದಾರೆ.

---

104 ಹುದ್ದೆಗಳ ಸೃಷ್ಟಿ

ಈ ಆಸ್ಪತ್ರೆಗೆ ಒಟ್ಟು 191 ಹುದ್ದೆಗಳ ಮಂಜೂರು ಮಾಡುವಂತೆ ಬಿಬಿಎಂಪಿಯು ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪ್ರಸ್ತಾವ ಸಲ್ಲಿಸಿದ್ದು, ಈಗಾಗಲೇ 104 ಹುದ್ದೆಗಳನ್ನು ಸೃಷ್ಟಿಸಲಾಗಿದೆ. ಈ ಹುದ್ದೆಗಳನ್ನು ನಿಯೋಜನೆ ಹಾಗೂ ಹೊರಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಸರ್ಕಾರ ಆದೇಶ ಮಾಡಿದೆ. ಮಾನವ ಸಂಪನ್ಮೂಲವನ್ನು ಬಿಬಿಎಂಪಿಯಿಂದಲೇ ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.