ADVERTISEMENT

‌ಬೆಂಗಳೂರು: 25 ಪ್ರಕರಣಗಳಲ್ಲಿ ಭಾಗಿಯಾದ ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 17:17 IST
Last Updated 28 ಜನವರಿ 2026, 17:17 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸುಬ್ರಹ್ಮಣ್ಯಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಕೋಟೆಬೆಟ್ಟ ಗ್ರಾಮದ ಗಣೇಶ್ ಅಲಿಯಾಸ್‌ ‘ಟಚ್‌’ ಗಣೇಶ್ (34) ಹಾಗೂ ಹೆಸರುಘಟ್ಟ ಸಮೀಪದ ತರಬನಹಳ್ಳಿಯ ಟಿ.ಎಸ್.ಶ್ರೀಧರ್ (35) ಬಂಧಿತರು.

ADVERTISEMENT

ಬಂಧಿತರಿಂದ ₹50 ಲಕ್ಷ ಮೌಲ್ಯದ 350 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಉತ್ತರಹಳ್ಳಿಯ ಎಜಿಎಸ್‌ ಲೇಔಟ್‌ನ ನಿವಾಸಿ ಎ.ರಾಘವೇಂದ್ರ ಅವರು ನೀಡಿದ ದೂರು ಆಧರಿಸಿ, ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2025ರ ಆಗಸ್ಟ್‌ 11ರಂದು ನಡೆದಿದ್ದ ಕೊಲೆ ಪ್ರಕರಣದಲ್ಲಿ ‘ಟಚ್‌’ ಗಣೇಶ್ ತಲೆಮರೆಸಿಕೊಂಡಿದ್ದ. ಬಳಿಕ ಆತನನ್ನು ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದರು. ಮನೆಗಳಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ತನಿಖೆ ನಡೆಸಿದಾಗ ಗಣೇಶ್‌ ಪಾತ್ರ ಇರುವುದು ಪತ್ತೆಯಾಗಿತ್ತು. ನ್ಯಾಯಾಲಯದ ಅನುಮತಿ ಪಡೆದು ಚಿತ್ರದುರ್ಗದ ಕಾರಾಗೃಹದಿಂದ ಕಸ್ಟಡಿಗೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಎಸಗಿರುವುದಾಗಿ ‘ಟಚ್‌’ ಗಣೇಶ್ ಒಪ್ಪಿಕೊಂಡಿದ್ದಾನೆ. ಪ್ಲಂಬರ್ ಕೆಲಸ ಮಾಡುತ್ತಿದ್ದ ಗಣೇಶ್ ವಿರುದ್ಧ ಸಿ.ಕೆ.ಅಚ್ಚುಕಟ್ಟು, ಆನೇಕಲ್‌, ಕೋಣನಕುಂಟೆ, ಬಸವೇಶ್ವರನಗರ, ಸೂರ್ಯನಗರ, ಮಹದೇವಪುರ, ವಿದ್ಯಾರಣ್ಯಪುರ, ಬಾಗಲಗುಂಟೆ, ಕುದೂರು ಸೇರಿದಂತೆ ವಿವಿಧ ಠಾಣೆಗಳಲ್ಲಿ 21 ಪ್ರಕರಣಗಳು ದಾಖಲಾಗಿದ್ದವು. ಶ್ರೀಧರ್ ವಿರುದ್ಧ ಸೋಲದೇವನಹಳ್ಳಿ ಠಾಣೆಯಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದರು.

ಎ.ರಾಘವೇಂದ್ರ ಅವರು ಮನೆಗೆ ಬೀಗ ಹಾಕಿಕೊಂಡು ಕುಟುಂಬ ಸಮೇತರಾಗಿ 2025ರ ಫೆಬ್ರುವರಿ 23ರಿಂದ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ತೆರಳಿದ್ದರು. ಎರಡು ದಿನ ಬಿಟ್ಟು ಬಂದು ನೋಡಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಪತ್ತೆಯಾಗಿತ್ತು ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.