ADVERTISEMENT

ಬೆಂಗಳೂರು–ಹುಬ್ಬಳ್ಳಿ ನಡುವೆ ಮಾರ್ಚ್‌ನಲ್ಲಿ ಹೈಸ್ಪೀಡ್ ರೈಲು: ಸಂಜೀವ್ ಕಿಶೋರ್

ಸಂಸದರು, ರಾಜ್ಯಸಭೆ ಸದಸ್ಯರೊಂದಿಗೆ ಸಚಿವೆ ದರ್ಶನಾ ಜರ್ದೋಶ್ ಸಭೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 18:30 IST
Last Updated 23 ಸೆಪ್ಟೆಂಬರ್ 2022, 18:30 IST
ಸಂಸದರು, ರಾಜ್ಯಸಭೆ ಸದಸ್ಯರೊಂದಿಗೆ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಸಭೆ ನಡೆಸಿದರು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಇದ್ದರು.
ಸಂಸದರು, ರಾಜ್ಯಸಭೆ ಸದಸ್ಯರೊಂದಿಗೆ ರೈಲ್ವೆ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಸಭೆ ನಡೆಸಿದರು. ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಇದ್ದರು.   

ಬೆಂಗಳೂರು: ‘ಬೆಂಗಳೂರು–ಹುಬ್ಬಳ್ಳಿ ನಡುವೆ ವಂದೇ ಭಾರತ ಹೈಸ್ಪೀಡ್ ರೈಲು 2023ರ ಮಾರ್ಚ್‌ನಲ್ಲಿ ಕಾರ್ಯಾಚರಣೆ ಆರಂಭಿಸಲಿದೆ’ ಎಂದು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ತಿಳಿಸಿದರು.

ರೈಲ್ವೆ ಮತ್ತು ಜವಳಿ ಖಾತೆ ರಾಜ್ಯ ಸಚಿವೆ ದರ್ಶನಾ ಜರ್ದೋಶ್ ಅವರು ಸಂಸದರು ಮತ್ತು ರಾಜ್ಯಸಭೆ ಸದಸ್ಯರೊಂದಿಗೆ ರಾಜ್ಯದ ರೈಲ್ವೆ ಯೋಜನೆ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಸಂಸದ ಲಹರ್ ಸಿಂಗ್ ಪ್ರಶ್ನೆಗೆ ಉತ್ತರಿಸಿದ ಸಂಜೀವ್ ಕಿಶೋರ್, ‘ಜೋಡಿ ಮಾರ್ಗದ ಕಾಮಗಾರಿ ಪ್ರಗತಿಯಲ್ಲಿದೆ.ಹಾವೇರಿ–ದಕ್ಷಿಣ ಹುಬ್ಬಳ್ಳಿ ಮಾರ್ಗದಲ್ಲಿ 45 ಕಿಲೋ ಮೀಟರ್ ಕಾಮಗಾರಿ ಮಾತ್ರ ಬಾಕಿ ಇದೆ. ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ’ ಎಂದರು.

ರಾಜ್ಯದ ರೈಲ್ವೆ ಯೋಜನೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಸಚಿವೆ ದರ್ಶನಾ ಜರ್ದೋಶ್‌, ‘ರಾಜ್ಯ ಸರ್ಕಾರ ಮತ್ತು ರೈಲ್ವೆ ಇಲಾಖೆ ನಡುವಿನ ಸಾಮರಸ್ಯ ಹೆಚ್ಚಿಸಬೇಕಿದೆ. ಅದಕ್ಕಿರುವ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುವ ಉದ್ದೇಶದಿಂದ ಈ ಸಭೆ ನಡೆಸಲಾಗಿದೆ’ ಎಂದು ಹೇಳಿದರು.

ADVERTISEMENT

ಗತಿಶಕ್ತಿ ಯೋಜನೆ ಬಳಿಸಿಕೊಂಡು ಉಪನಗರ ರೈಲು ಯೋಜನೆ ಸೇರಿ ರಾಜ್ಯದ ಎಲ್ಲಾ ರೈಲ್ವೆ ಯೋಜನೆಗಳ ವೇಗ ಹೆಚ್ಚಿಸಲಾಗುವುದು. ತಮ್ಮ ಕ್ಷೇತ್ರಗಳ ರೈಲ್ವೆ ಯೋಜನೆ ಅನುಷ್ಠಾನಕ್ಕೆ ಇರುವ ಸವಾಲುಗಳನ್ನು ಸಂಸದರು ವಿವರಿಸಿದ್ದು, ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಂದೇ ಭಾರತ್, ಒಂದು ನಿಲ್ದಾಣ–ಒಂದು ಉತ್ಪನ್ನ, ಕವಚದಂತಹ ಹೊಸ ಕಾರ್ಯಕ್ರಮದಿಂದ ರೈಲ್ವೆ ಇಲಾಖೆ ಜನರಿಗೆ ಇನ್ನಷ್ಟು ಹತ್ತಿರ ಆಗಲಿದೆ ಎಂದು ತಿಳಿಸಿದರು.

ಸಂಸದರಾದ ಬಿ.ಎನ್. ಬಚ್ಚೇಗೌಡ, ಎಸ್.ಮುನಿಸ್ವಾಮಿ, ಸುಮಲತಾ ಅಂಬರೀಶ್, ಜಿ.ಎಸ್.ಬಸವರಾಜ್, ಲಹರ್ ಸಿಂಗ್, ರಾಜಾ ಅಮರೇಶ್ವರ ನಾಯ್ಕ್, ಶಿವಕುಮಾರ್ ಉದಾಸಿ, ವೈ.ದೇವೇಂದ್ರಪ್ಪ, ಉಮೇಶ್ ಜಿ. ಜಾಧವ್, ಅಣ್ಣಾಸಾಹೇಬ ಶಂಕರ ಜೊಲ್ಲೆ, ಕರಡಿ ಸಂಗಣ್ಣ, ಪ್ರತಾಪ ಸಿಂಹ ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.