ADVERTISEMENT

ಬೆಂಗಳೂರು: ಪತ್ನಿ ಕೊಲೆ ಮಾಡಿ ಕಥೆ ಕಟ್ಟಿದ್ದ ಪತಿಯ ಬಂಧನ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2025, 16:28 IST
Last Updated 18 ಅಕ್ಟೋಬರ್ 2025, 16:28 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಪತ್ನಿಯ ಕುತ್ತಿಗೆ ಹಿಸುಕಿ ಕೊಲೆ ಮಾಡಿ, ಎಲೆಕ್ಟ್ರಿಕ್‌ ವಾಟರ್‌ ಹೀಟರ್‌ ಹಾಕುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂಬುದಾಗಿ ಕಥೆ ಕಟ್ಟಿದ್ದ ಪತಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಮರಗೊಂಡನಹಳ್ಳಿ ನಿವಾಸಿ ರೇಷ್ಮಾ(32) ಕೊಲೆಯಾದ ಮಹಿಳೆ.

ಕೃತ್ಯ ಎಸಗಿದ ಆರೋಪದ ಅಡಿ ರೇಷ್ಮಾ ಅವರ ಎರಡನೇ ಪತಿ ಪ್ರಶಾಂತ್ ಕುಮಾರ್‌ (25) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರೇಷ್ಮಾ ಸಹೋದರಿ ರೇಣುಕಾ ಅವರು ದೂರು ನೀಡಿದ್ದರು.

‘ಹೆಬ್ಬಗೋಡಿಯ ಮರಗೊಂಡಹಳ್ಳಿ ನಿವಾಸಿ ರೇಷ್ಮಾ ಅವರು 15 ವರ್ಷಗಳ ಹಿಂದೆ ಸುರೇಂದರ್ ಅವರನ್ನು ಮದುವೆ ಆಗಿದ್ದರು. ದಂಪತಿಗೆ 15 ವರ್ಷದ ಪುತ್ರಿ ಇದ್ದಾಳೆ. ಅನಾರೋಗ್ಯದಿಂದ ಪತಿ ಮೃತಪಟ್ಟಿದ್ದರು. ಈ ಮಧ್ಯೆ ಇನ್‌ಸ್ಟಾಗ್ರಾಂನಲ್ಲಿ ಬಳ್ಳಾರಿಯ ಹೂವಿನಹಡಗಲಿ ಮೂಲದ ಪ್ರಶಾಂತ್ ಪರಿಚಯವಾಗಿದ್ದ. ಬಳಿಕ ಇಬ್ಬರೂ ಮದುವೆ ಆಗಿದ್ದರು. ಕೆಲವು ದಿನಗಳ ಬಳಿಕ ರೇಷ್ಮಾ ಅವರು ಬೇರೊಬ್ಬ ವ್ಯಕ್ತಿಯ ಜತೆಗೆ ಹೆಚ್ಚು ಮಾತುಕತೆ ನಡೆಸುತ್ತಿದ್ದರು. ಈ ವಿಚಾರಕ್ಕೆ ಮನೆಯಲ್ಲಿ ನಿತ್ಯ ಗಲಾಟೆ ನಡೆಯುತ್ತಿತ್ತು. ಮಗಳು ಶಾಲೆಗೆ ಹೋದಾಗ, ಆರೋಪಿ ಪತ್ನಿ ಮೇಲೆ ಹಲ್ಲೆ ನಡೆಸಿ, ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ಕೃತ್ಯ ಎಸಗಿದ ಬಳಿಕ ಪತ್ನಿಯ ಮೃತದೇಹವನ್ನು ಶೌಚಾಲಯಕ್ಕೆ ಎಳೆದೊಯ್ದು ಇಟ್ಟಿದ್ದ. ಬಳಿಕ, ಎಲೆಕ್ಟ್ರಿಕ್‌ನ ವಾಟರ್‌ ಹೀಟರ್‌ ಹಾಕುವ ವೇಳೆ ವಿದ್ಯುತ್‌ ಸ್ಪರ್ಶಿಸಿ ಮೃತಪಟ್ಟಿದ್ದಾಳೆ ಎಂದು ಬಿಂಬಿಸಿ ಪರಾರಿಯಾಗಿದ್ದ. ಆದರೆ, ಸಂಜೆ ಮನೆಗೆ ಬಂದ ಮಗಳು ಅಮ್ಮನಿಗಾಗಿ ಹುಡುಕಾಟ ನಡೆಸಿದ್ದಳು. ಬಳಿಕ ಹೊರಗಿನಿಂದ ಚಿಲಕ ಹಾಕಿದ್ದ ಶೌಚಾಲಯದ ಬಾಗಿಲು ತೆರೆದಾಗ ಅಮ್ಮ ಬಿದ್ದಿರುವುದು ಗೊತ್ತಾಗಿತ್ತು. ಆಂತಕಗೊಂಡು ದೊಡ್ಡಮ್ಮ ರೇಣುಕಾ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಳು’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.