ADVERTISEMENT

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ₹5.14 ಕೋಟಿ ವಂಚನೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 16:32 IST
Last Updated 21 ಜನವರಿ 2026, 16:32 IST
ಸೈಬರ್ ವಂಚನೆ
ಸೈಬರ್ ವಂಚನೆ   

ಬೆಂಗಳೂರು: ನಗರದ ಮಲ್ಟಿನ್ಯಾಷನಲ್‌ ಕಂಪನಿಯೊಂದರಲ್ಲಿ(ಎಂಎನ್‌ಸಿ) ಕೆಲಸ ಮಾಡುತ್ತಿರುವ 58 ವರ್ಷದ ವ್ಯಕ್ತಿಯಿಂದ ಸೈಬರ್ ವಂಚಕರು ಹೂಡಿಕೆಯ ಹೆಸರಿನಲ್ಲಿ ₹5.14 ಕೋಟಿ ದೋಚಿದ್ದಾರೆ. 

ಹಣ ಕಳೆದುಕೊಂಡವರು ಆರ್‌.ಟಿ. ನಗರದಲ್ಲಿ ನೆಲಸಿದ್ದಾರೆ. ಅವರು ನೀಡಿದ ದೂರಿನ ಮೇರೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಉತ್ತರ ವಿಭಾಗದ ಸೈಬರ್ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಂಚಕರು ಕಳುಹಿಸಿದ್ದ ಲಿಂಕ್‌ ಮೂಲಕ ವಿವಿಧ ವಾಟ್ಸ್‌ಆ್ಯಪ್‌ ಗ್ರೂಪ್‌ಗಳಿಗೆ ದೂರುದಾರರು ಸೇರ್ಪಡೆ ಆಗಿದ್ದರು. ಆ ಗ್ರೂಪ್‌ನಲ್ಲಿ ಹೂಡಿಕೆ ಮಾಡುವಂತೆ ದೀಪಾ ಹಾಗೂ ದಿನೇಶ್‌ ಕೆ. ವಘೇವಾ ಅವರು ದೂರುದಾರರ ಮನವೊಲಿಸಿದ್ದರು.

ADVERTISEMENT

ವಂಚಕರು ನೀಡಿದ ಸೂಚನೆಯಂತೆ ನಕಲಿ ಆ್ಯಪ್ ‘ಎಲ್‌ಕೆಪಿಎನ್‌ಡ್ಲ್ಯುಎಲ್‌’ ಡೌನ್‌ಲೋಡ್ ಮಾಡಿಕೊಂಡು ಹೂಡಿಕೆ ಮಾಡಲು ಆರಂಭಿಸಿದ್ದರು. 2025ರ ನವೆಂಬರ್ 12ರಿಂದ 2026ರ ಜನವರಿ 7ರ ವರೆಗೆ ಹಂತ ಹಂತವಾಗಿ ದೂರುದಾರರು, ₹5.14 ಕೋಟಿ ಹೂಡಿಕೆ ಮಾಡಿದ್ದರು. ಕೆಲವು ದಿನಗಳು ಕಳೆದ ಮೇಲೆ ನಕಲಿ ಆ್ಯಪ್‌ನಲ್ಲಿ ₹19 ಕೋಟಿ ಲಾಭಾಂಶ ಬಂದಿರುವಂತೆ ತೋರಿಸಲಾಗುತ್ತಿತ್ತು. ಅದನ್ನು ನಂಬಿದ್ದ ದೂರುದಾರರು, ಆ ಹಣವನ್ನು ವಾಪಸ್‌ ಪಡೆಯಲು ಮುಂದಾಗಿದ್ದರು. ಆಗ ವಂಚಕರು ಕರೆ ಮಾಡಿ, ₹19 ಕೋಟಿ ಹಣವನ್ನು ಡ್ರಾ ಮಾಡಿಕೊಳ್ಳಬೇಕಾದರೆ, ಹೆಚ್ಚುವರಿಯಾಗಿ ₹2 ಕೋಟಿ ಪಾವತಿಸುವಂತೆ ಸೂಚಿಸಿದ್ದರು. ಆಗ ವಂಚನೆ ನಡೆದಿರುವುದು ಅರಿವಿಗೆ ಬಂದು ದೂರು ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

‘₹3 ಕೋಟಿ ಮೇಲ್ಪಟ್ಟ ವಂಚನೆ ಪ್ರಕರಣಗಳ ತನಿಖೆಯನ್ನು ಸಿಐಡಿ ನಡೆಸಲಿದೆ. ಸಿಐಡಿ ಪೊಲೀಸರು ಈ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುವವರೆಗೆ ಉತ್ತರ ವಿಭಾಗದ ಸೈಬರ್‌ ಅಪರಾಧ ಠಾಣೆಯ ಪೊಲೀಸರೇ ತನಿಖೆ ನಡೆಸಲಿದ್ದಾರೆ’ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.