ADVERTISEMENT

ಐಪಿಎಲ್‌ ಪಂದ್ಯದ ವೀಕ್ಷಣೆ ವೇಳೆ ಐ‍ಪಿಎಸ್‌, ಐ.ಟಿ ಅಧಿಕಾರಿ ಕುಟುಂಬದ ಮಧ್ಯೆ ಜಗಳ

ಐಪಿಎಲ್‌ ಪಂದ್ಯದ ವೀಕ್ಷಣೆ ವೇಳೆ ಗಲಾಟೆ: ಠಾಣೆ ಮೆಟ್ಟಿಲೇರಿದ ಕುಟುಂಬ

​ಪ್ರಜಾವಾಣಿ ವಾರ್ತೆ
Published 7 ಮೇ 2025, 0:30 IST
Last Updated 7 ಮೇ 2025, 0:30 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

(ಸಾಂದರ್ಭಿಕ ಚಿತ್ರ)

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 3ರಂದು (ಶನಿವಾರ) ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು(ಆರ್‌ಸಿಬಿ) ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ (ಸಿಎಸ್‌ಕೆ) ನಡುವೆ ನಡೆದ ಪಂದ್ಯದ ವೀಕ್ಷಣೆ ವೇಳೆ ಹಿರಿಯ ಐಪಿಎಸ್‌ ಅಧಿಕಾರಿಯ ಮಕ್ಕಳು ಹಾಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿ ಕುಟುಂಬದ ಮಧ್ಯೆ ಸೀಟಿಗಾಗಿ ಜಗಳ ನಡೆದಿದ್ದು, ಪ್ರಕರಣವು ಕಬ್ಬನ್‌ಪಾರ್ಕ್‌ ಪೊಲೀಸ್‌ ಠಾಣೆಯ ಮೆಟ್ಟಿಲೇರಿದೆ.

ADVERTISEMENT

ಘಟನೆಯು ವಿಐಪಿ(ಡೈಮಂಡ್ ಬಾಕ್ಸ್‌) ಗ್ಯಾಲರಿಯಲ್ಲಿ ಅಧಿಕಾರಿಗಳ ಸಮ್ಮುಖದಲ್ಲಿ ನಡೆದಿದೆ.

ನೀತು ಠಾಕೂರ್‌ ಎಂಬುವರು ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಏನಿದೆ?:

‘ನನ್ನ ಮಕ್ಕಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ತಂಡಗಳ ಮಧ್ಯೆ ನಡೆದ ಪಂದ್ಯ ವೀಕ್ಷಣೆಗೆ ತೆರಳಿದ್ದರು. ಡೈಮಂಡ್‌ ಬಾಕ್ಸ್‌ ಗ್ಯಾಲರಿಯಲ್ಲಿ ಅಂದು ರಾತ್ರಿ 9.40ರ ಸುಮಾರಿಗೆ ಅಪರಿಚಿತ ವ್ಯಕ್ತಿಯೊಬ್ಬರು ವಿನಾ ಕಾರಣ ಜೋರಾಗಿ ಕಿರುಚಾಡಿ, ಬೆದರಿಕೆ ಹಾಕಿ ನನ್ನ ಮಗಳಿಗೆ ತೊಂದರೆ ಕೊಟ್ಟಿದ್ದಾರೆ. ಅಲ್ಲದೇ ನನ್ನ ಮಗಳನ್ನು ಮುಟ್ಟಿ ಅಸಭ್ಯವಾಗಿ ನಿಂದಿಸಿದ್ದಾರೆ. ದಂಪತಿ ಅವಾಚ್ಯ ಪದಗಳಿಂದ ಬೈದು ನನ್ನ ಮಗಳನ್ನು ನಿಂದಿಸಿದ್ದಾರೆ. ಈ ಎಲ್ಲ ಘಟನೆಯನ್ನು ಪುತ್ರ ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡಿದ್ದಾನೆ. ನನ್ನ ಮಕ್ಕಳಿಗೆ ತೊಂದರೆ ಕೊಟ್ಟಿರುವ ಆರೋಪಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ನೀತು ಠಾಕೂರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಯಾವೆಲ್ಲಾ ಸೆಕ್ಷನ್‌?:

ದೂರಿನ ಆಧಾರದ ಮೇಲೆ, ಪೊಲೀಸರು ಇಬ್ಬರು ಅಪರಿಚಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 351 (ಕ್ರಿಮಿನಲ್ ಬೆದರಿಕೆ), 352 (ಶಾಂತಿ ಭಂಗ ಉಂಟುಮಾಡುವ ಉದ್ದೇಶದಿಂದ ಉದ್ದೇಶ ಪೂರ್ವಕವಾಗಿ ಅವಮಾನ), 75 (ಲೈಂಗಿಕ ಕಿರುಕುಳ, ಇದರಲ್ಲಿ ಅನಗತ್ಯ ಸ್ಪರ್ಶ ಸೇರಿದೆ) ಮತ್ತು 79 (ಮಹಿಳೆಯ ಘನತೆಗೆ ಧಕ್ಕೆ ತರುವುದು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಯಾಕಾಗಿ ಗಲಾಟೆ?:

‘ವಿಐಪಿ ಬಾಕ್ಸ್‌ನಲ್ಲಿ ಐಪಿಎಸ್‌ ಅಧಿಕಾರಿಯ ಪುತ್ರ ಮತ್ತು ಪುತ್ರಿ ಪಂದ್ಯ ವೀಕ್ಷಿಸಲು ಕುಳಿತಿದ್ದರು. ಪುತ್ರಿ ಶೌಚಾಲಯಕ್ಕೆ ತೆರಳಿದ್ದರು. ತನ್ನ ಪರ್ಸ್‌ ಅನ್ನು ಸೀಟಿನ ಮೇಲೆ ಇಟ್ಟು ಹೋಗಿದ್ದರು. ಆಗ ವ್ಯಕ್ತಿಯೊಬ್ಬರು ಬಂದು ಅದೇ ಸೀಟಿನಲ್ಲಿ ಕುಳಿತಿದ್ದಾರೆ. ಅಲ್ಲೇ ಇದ್ದ ಪುತ್ರ ಪ್ರಶ್ನೆ ಮಾಡಿದ್ದಾರೆ. ಶೌಚಾಲಯದಿಂದ ಬಂದ ಪುತ್ರಿ ಸಹ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಐಪಿಎಸ್‌ ಅಧಿಕಾರಿಗಳ ಮಕ್ಕಳು ಹಾಗೂ ಐಟಿ ಅಧಿಕಾರಿ ದಂಪತಿ ಮಧ್ಯೆ ಗಲಾಟೆ ವಿಕೋಪಕ್ಕೆ ಹೋಗಿತ್ತು’ ಎಂದು ಮೂಲಗಳು ತಿಳಿಸಿವೆ.

‘ಗಲಾಟೆ ಜೋರಾದ ಮೇಲೆ ಮಕ್ಕಳಿಬ್ಬರು ತಾಯಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಆಗ ತಾಯಿ ಸ್ಥಳಕ್ಕೆ ಬಂದಿದ್ದರು. ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಿದ್ದಾರೆ’ ಎಂದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.