ADVERTISEMENT

ಬೆಂಗಳೂರು: ನ್ಯಾಯಾಧೀಶರಿಗೆ ₹ 12 ಸಾವಿರ ವಂಚನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 16:21 IST
Last Updated 9 ಸೆಪ್ಟೆಂಬರ್ 2025, 16:21 IST
   

ಬೆಂಗಳೂರು: ನಗರದ ಕುಮಾರ ಕೃಪಾ ಅತಿಥಿ ಗೃಹದಲ್ಲಿ ಕೊಠಡಿ ಕಾಯ್ದಿರಿಸುವ ನೆಪದಲ್ಲಿ ಪಂಜಾಬ್ ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶರಿಗೆ ₹12 ಸಾವಿರ ರೂಪಾಯಿ ವಂಚನೆ ಮಾಡಿರುವ ಪ್ರಕರಣ ವರದಿಯಾಗಿದೆ.

ಸೆಪ್ಟೆಂಬರ್ 2ರಂದು ನ್ಯಾಯಾಧೀಶರು ಕೊಠಡಿ ಕಾಯ್ದಿರಿಸುವ ಸಲುವಾಗಿ ತಮಗೆ ಪರಿಚಯದ ಪೊಲೀಸ್ ಅಧಿಕಾರಿಯೊಬ್ಬರಿಗೆ ಕರೆ ಮಾಡಿದ್ದರು. ಅಧಿಕಾರಿಯ ಆಪ್ತ ಸಹಾಯಕ ಆನ್‌ಲೈನ್‌ನಲ್ಲಿ ಪರಿಶೀಲಿಸಿ, ನಕಲಿ ನಂಬರ್ ನೀಡಿದ್ದರು. ನ್ಯಾಯಾಧೀಶರು ಆ ನಂಬರ್‌ಗೆ ಕರೆ ಮಾಡಿ ಕೊಠಡಿ ಕಾಯ್ದಿರಿಸುವಂತೆ ಹೇಳಿದಾಗ, ಆತ ₹12 ಸಾವಿರ ಪಾವತಿಸುವಂತೆ ಹೇಳಿದ್ದಾನೆ. ಇದನ್ನು ನಂಬಿ ಅವರು ಹಣ ಪಾವತಿಸಿದ್ದಾರೆ.

ಕೊಠಡಿ ಬುಕ್‌ ಆಗಿದೆ ಎಂದು ನಂಬಿ ನ್ಯಾಯಾಧೀಶರು, ಸೆಪ್ಟೆಂಬರ್ 6ರಂದು ನಗರಕ್ಕೆ ಬಂದಿಳಿದು ನೇರವಾಗಿ ಕುಮಾರ ಕೃಪಾ  ಅತಿಥಿ ಗೃಹಕ್ಕೆ ಬಂದು ವಿಚಾರಿಸಿದ್ದಾರೆ. ಆಗ ಅವರ ಹೆಸರಲ್ಲಿ ಯಾವುದೇ ಕೊಠಡಿ ಕಾಯ್ದಿರಿಸದೇ ಇರುವುದು ಗೊತ್ತಾಗಿದೆ. ಕೂಡಲೇ ನ್ಯಾಯಾಧೀಶರು ಆ ವ್ಯಕ್ತಿಯ ನಂಬರ್​ಗೆ ಕರೆ ಮಾಡಿದಾಗ ಸ್ವಿಚ್‌ ಆಫ್ ಬಂದಿದೆ. ವಂಚನೆಗೆ ಒಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ.

ADVERTISEMENT

ಕೇಂದ್ರ ಸೈಬರ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಕೇಂದ್ರ ಸಚಿವರ ಹೆಸರಲ್ಲಿ ರಾಜ್ಯಪಾಲರಿಗೆ ಕರೆ: ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರಿಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೆಸರಿನಲ್ಲಿ ದೂರವಾಣಿ ಕರೆ ಮಾಡಿ ವಂಚನೆಗೆ ಯತ್ನಿಸಲಾಗಿದೆ. ಮೂರು ದಿನಗಳ ಹಿಂದೆ ಎರಡು ಬಾರಿ ರಾಜ್ಯಪಾಲರಿಗೆ ಕರೆ ಮಾಡಿದ ವ್ಯಕ್ತಿ, ತಾನು ಧರ್ಮೇಂದ್ರ ಪ್ರಧಾನ್ ಎಂದು ಪರಿಚಯಿಸಿಕೊಂಡು ಅವರಂತೆ ಮಾತನಾಡಿದ್ದಾನೆ. ಆದರೆ, ಈ ಕರೆಯನ್ನು ಪರಿಶೀಲಿಸಿದ ನಂತರ, ಅದು ನಕಲಿ ಎಂದು ಗೊತ್ತಾಗಿದೆ.

ಕೂಡಲೇ ರಾಜ್ಯಪಾಲರ ಕಚೇರಿಯ ಅಧಿಕಾರಿಗಳು ಕೇಂದ್ರ ವಿಭಾಗದ ಸೈಬರ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರಿನ ಅನ್ವಯ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 66 (ಸಿ) ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಕರೆ ಮಾಡಿದ ನಂಬರ್‌ನ ಲೋಕೇಷನ್ ಆಧರಿಸಿ, ಆರೋಪಿ ಪತ್ತೆ ಹಚ್ಚಲು ತನಿಖೆ ಆರಂಭಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.