ADVERTISEMENT

ಬೆಂಗಳೂರು: ಕರಗ ಉತ್ಸವದ ಸಿದ್ಧತೆ ಚುರುಕು

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2022, 16:16 IST
Last Updated 18 ಮಾರ್ಚ್ 2022, 16:16 IST
ಸಭೆಯಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್ ಮಾತನಾಡಿದರು. ಗೌರವ್ ಗುಪ್ತ, ಪಿ.ಆರ್. ರಮೇಶ್, ಜೆ.ಮಂಜುನಾಥ್ ಇದ್ದರು
ಸಭೆಯಲ್ಲಿ ಶಾಸಕ ಉದಯ್ ಬಿ. ಗರುಡಾಚಾರ್ ಮಾತನಾಡಿದರು. ಗೌರವ್ ಗುಪ್ತ, ಪಿ.ಆರ್. ರಮೇಶ್, ಜೆ.ಮಂಜುನಾಥ್ ಇದ್ದರು   

ಬೆಂಗಳೂರು: ಐತಿಹಾಸಿಕ ಬೆಂಗಳೂರು ಕರಗ ಉತ್ಸವ ಅದ್ಧೂರಿಯಿಂದ ಆಚರಿಸಲು ನಿರ್ಧರಿಸಿರುವ ಬಿಬಿಎಂಪಿ, ಸಿದ್ಧತೆ ಕಾರ್ಯಗಳನ್ನು ಚುರುಕುಗೊಳಿಸಿದೆ.

ಮುಖ್ಯ ಆಯುಕ್ತ ಗೌರವ್ ಗು‍ಪ್ತ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ಧತಾ ಸಭೆ ಶುಕ್ರವಾರ ನಡೆಯಿತು. ಶಾಸಕ ಉದಯ್ ಬಿ. ಗರುಡಾಚಾರ್ ಮಾತನಾಡಿ, ‘ಕರಗ ಉತ್ಸವವು ಪುರಾತನ ಹಾಗೂ ಪ್ರಸಿದ್ಧ ಹಬ್ಬವಾಗಿದೆ. ಕೋವಿಡ್ ಸೋಂಕು ಆವರಿಸಿದ್ದರಿಂದ ಎರಡು ವರ್ಷ ಸರಳವಾಗಿ ಆಚರಿಸಲಾಗಿತ್ತು. ಈಗ ಸೋಂಕು ಕಡಿಮೆಯಾಗಿದ್ದು, ನಿಯಮಗಳನ್ನು ಪಾಲಿಸಿಕೊಂಡೇ ಅದ್ಧೂರಿಯಾಗಿ ಆಚರಣೆ ಮಾಡಲು ಸಿದ್ದತೆ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಿ.ಆರ್.ರಮೇಶ್ ಮಾತನಾಡಿ, ‘‌ಕರಗ ಉತ್ಸವವು ದಕ್ಷಿಣ, ಪೂರ್ವ ಹಾಗೂ ಪಶ್ಚಿಮ ವಲಯಗಳ ವ್ಯಾಪ್ತಿಯಲ್ಲಿ ನಡೆಯಲಿದ್ದು, ಕರಗ ಹೋಗಿ ಬರುವ ಎಲ್ಲ ರಸ್ತೆಗಳನ್ನು ದುರಸ್ತಿಗೊಳಿಸಿ ಸುಸ್ಥಿತಿಯಲ್ಲಿಡಬೇಕು. ಸಂಪಂಗಿರಾಮ ನಗರದ ಕಲ್ಯಾಣಿಯ ಸುತ್ತಲು ಸ್ವಚ್ಛಗೊಳಿಸಬೇಕು. ಬೀದಿ ದೀಪಗಳ ಅಳವಡಿಕೆ, ಜಲ ಮಂಡಳಿಯಿಂದ ಸಮರ್ಪಕ ನೀರಿನ ವ್ಯವಸ್ಥೆ, ಒಳಚರಂಡಿ ಸ್ವಚ್ಛಗೊಳಿಸುವ ಕೆಲಸ ಮಾಡಬೇಕು. ಉತ್ಸವಕ್ಕೆ ಅಗತ್ಯ ಅನುದಾನವನ್ನು ಕೂಡಲೆ ಬಿಡುಗಡೆ ಮಾಡಬೇಕು’ ಎಂದು ಹೇಳಿದರು.

ADVERTISEMENT

ಗೌರವ್ ಗುಪ್ತ ಮಾತನಾಡಿ, ‘ಕೋವಿಡ್ ಸೋಂಕು ನಿಯಂತ್ರಣದಲ್ಲಿದೆ. ಏ.8 ರಿಂದ ಆರಂಭವಾಗಲಿದ್ದು, ಏ.16 ರಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಮೆರವಣಿಗೆಯಲ್ಲಿ ಅತಿ ಗಣ್ಯರು ಭಾಗವಹಿಸಲಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಸೇರಲಿದ್ದು, ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ಪಾಲಿಕೆ, ಜಿಲ್ಲಾಧಿಕಾರಿ, ಮುಜರಾಯಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಮನ್ವಯದಿಂದ ಕಾರ್ಯನಿರ್ವಹಿಸಿ ಯಾವುದೇ ಅಡಚಣೆ ಆಗದಂತೆ ಉತ್ಸವ ಯಶಸ್ವಿಗೊಳಿಸಬೇಕು’ ಎಂದರು.

ನಗರ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಪಾಲಿಕೆ ವಿಶೇಷ ಆಯುಕ್ತರಾದ ತ್ರಿಲೋಕ್ ಚಂದ್ರ, ರಂಗಪ್ಪ, ತುಳಸಿ ಮದ್ದಿನೇನಿ, ಜಂಟಿ ಆಯುಕ್ತರಾದ ಶಿಲ್ಪಾ, ಶ್ರೀನಿವಾಸ್, ಜಗದೀಶ್ ನಾಯಕ್, ಉಪ ಆಯುಕ್ತ ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.