ADVERTISEMENT

Karnataka Bandh: ಬೆಂಗಳೂರಿನಲ್ಲಿ ನಿರಸ ಪ್ರತಿಕ್ರಿಯೆ

ಕನ್ನಡಿಗರ ಮೇಲಿನ ಪರಭಾಷಿಕರ ದಬ್ಬಾಳಿಕೆ, ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2025, 16:10 IST
Last Updated 22 ಮಾರ್ಚ್ 2025, 16:10 IST
<div class="paragraphs"><p>ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಲ್ಲಿ ಶನಿವಾರ ವಾಹನ ಸಂಚಾರ ವಿರಳವಾಗಿತ್ತು</p></div>

ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ಮೆಜೆಸ್ಟಿಕ್‌ನಲ್ಲಿ ಶನಿವಾರ ವಾಹನ ಸಂಚಾರ ವಿರಳವಾಗಿತ್ತು

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಕನ್ನಡಿಗರ ಮೇಲಿನ ಪರಭಾಷಿಕರ ದಬ್ಬಾಳಿಕೆ, ಉದ್ಯೋಗದಲ್ಲಿ ಕನ್ನಡಿಗರ ಕಡೆಗಣನೆಯನ್ನು ಖಂಡಿಸಿ ಸಾರಿಗೆ ಸಂಸ್ಥೆಯ ಬಸ್‌ಗಳ ಚಾಲಕ ನಿರ್ವಾಹಕರ ರಕ್ಷಣೆ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ವಾಟಾಳ್ ಪಕ್ಷ ಮತ್ತು ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಬೆಂಗಳೂರು ನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ADVERTISEMENT

ಬೆಳಿಗ್ಗೆಯಿಂದಲೂ ಆಟೊ, ವಾಹನಗಳ ಸಂಚಾರ ಹಾಗೂ ಹೋಟೆಲ್‌, ಅಂಗಡಿ ವ್ಯಾಪಾರ, ತರಕಾರಿ, ಹಣ್ಣು–ಹೂವಿನ ಮಾರುಕಟ್ಟೆಗಳಲ್ಲಿ ವಹಿವಾಟುಗಳು ನಿರಾತಂಕವಾಗಿ ನಡೆಯಿತು. ಸರ್ಕಾರಿ, ಖಾಸಗಿ ಕಚೇರಿಗಳು ಹಾಗೂ ಶಾಲಾ-ಕಾಲೇಜುಗಳು ಸಹ ಎಂದಿನಂತೆಯೇ ಕಾರ್ಯನಿರ್ವಹಿಸಿದವು. ಎಲ್ಲ ಮಾಲ್‌ಗಳು ತೆರೆದಿದ್ದವು. ಮಲ್ಟಿಪ್ಲೆಕ್ಸ್‌ಗಳಲ್ಲಿ ಸಿನಿಮಾ ಪ್ರದರ್ಶನ ನಡೆಯುತ್ತಿತ್ತು. ಮುಂಜಾಗ್ರತಾ ಕ್ರಮವಾಗಿ ನಗರದ ಪ್ರಮುಖ‌ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಆಟೊ, ಕ್ಯಾಬ್‌ಗಳ ಸಂಖ್ಯೆ ಕಡಿಮೆ ಇತ್ತು. ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಎಂದಿನಂತೆಯೇ ಇತ್ತು.  ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಕೆಲ ಪ್ರತಿಭಟನಕಾರರು ಬಿಎಂಟಿಸಿ ಬಸ್‌ಗಳನ್ನು ತಡೆದು, ಬಸ್‌ಗಳ ಗಾಜಿನ ಮೇಲೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಬರೆದರು. ಕೆಲ ಓಲಾ, ಊಬರ್‌ನ ಆಟೊ ಚಾಲಕರು ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಉದ್ಯಾನ ಹೊರೆತುಪಡಿಸಿ ಬೇರೆ ಕಡೆಗೆ ಯಾವುದೇ ಮೆರವಣಿಗೆ, ಪ್ರತಿಭಟನೆಗೆ ಪೊಲೀಸರು ಅವಕಾಶವಿರಲಿಲ್ಲ. ವಾಟಾಳ್‌ ನಾಗರಾಜ್‌ ಅವರು ನೇತೃತ್ವದಲ್ಲಿ ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ರ್‍ಯಾಲಿ ನಡೆಸಲು ಪ್ರತಿಭಟನಕಾರರು ತೀರ್ಮಾನಿಸಿದ್ದರು. ರ್‍ಯಾಲಿಯಲ್ಲಿ ಭಾಗವಹಿಸಲು ಪುರಭವನದ ಬಳಿ ಬರುತ್ತಿದ್ದಂತೆಯೇ ವಾಟಾಳ್‌ ನಾಗರಾಜ್‌, ಸಾ.ರಾ.ಗೋವಿಂದು ಅವರನ್ನು ಪೊಲೀಸರು ವಶಕ್ಕೆ ಪಡೆದು, ಬಸ್‌ನಲ್ಲಿ ಸ್ವಾತಂತ್ರ್ಯ ಉದ್ಯಾನಕ್ಕೆ ಕರೆದುಕೊಂಡು ಹೋದರು.

ಬೆಳಗಾವಿಯಲ್ಲಿ ಮರಾಠಿಗರ ಪುಂಡಾಟಿಕೆ ಖಂಡಿಸಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಸ್ವಾತಂತ್ರ್ಯ ಉದ್ಯಾನದಲ್ಲಿ ಕೊರಳಿಗೆ ಪ್ಲಾಸ್ಟಿಕ್‌ ಬಾಟಲಿಗಳ ಮಾಲೆ ಹಾಕಿಕೊಂಡು ಉರುಳು ಸೇವೆ ಮಾಡಿದರು ಪ್ರಜಾವಾಣಿ ಚಿತ್ರ

ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜಾಜಿನಗರ ಮೆಟ್ರೊ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡಪರ ಸಂಘಟನೆಗಳ ಹೋರಾಟಗಾರರನ್ನು ಪೂಲೀಸರು ವಶಕ್ಕೆ ಪಡೆದರು.

ಸ್ವಾತಂತ್ರ್ಯ ಉದ್ಯಾನದಲ್ಲಿ ಕನ್ನಡ ಪರ ಹೋರಾಟಗಾರರು ‘ಎಂಇಎಸ್‌’ ಸಂಘಟನೆಯ ತಿಥಿ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ‘ಬೆಳಗಾವಿ ನಮಗೆ, ತಿಥಿ ವಡೆ ನಿಮಗೆ’ ಎಂದು ಘೋಷಣೆಗಳನ್ನು ಕೂಗಿದರು.

ಪ್ರಕರಣ ದಾಖಲು
ಕರ್ನಾಟಕ ಬಂದ್‌ ವೇಳೆ ಬೆಳಿಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನಿಂದ ಉತ್ತರಹಳ್ಳಿಗೆ ತೆರಳುತ್ತಿದ್ದ, ಬಿಎಂಟಿಸಿ ಬಸ್‌ ಗಾಜಿಗೆ ಮಸಿ ಬಳಿದ ಆರೋಪದ ಮೇಲೆ ಕನ್ನಡಪರ ಸಂಘಟನೆಗಳ ಮೂವರು ಕಾರ್ಯಕರ್ತರ ವಿರುದ್ಧ ಉಪ್ಪಾರಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಹಾಯಕ ಸಂಚಾರ ಅಧೀಕ್ಷಕ ಎನ್‌.ನಟರಾಜು ಅವರ ದೂರಿನ ಮೇರೆಗೆ ಆರೋಪಿಗಳಾದ ಶ್ರೀನಿವಾಸ, ಮಂಜುನಾಥ್‌ ಮತ್ತು ಡಿ. ಮಂಜುನಾಥ್‌ ಅವರನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಪುರಭವನದಿಂದ ಸ್ವಾತಂತ್ರ್ಯ ಉದ್ಯಾನದವರೆಗೆ ನಡೆಯಬೇಕಿದ್ದ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ಬಂದಿದ್ದ ವಾಟಾಳ್ ನಾಗರಾಜ್‌ ಅವರನ್ನು ಪೊಲೀಸರು ವಶಕ್ಕೆ ಪಡೆದರು ಪ್ರಜಾವಾಣಿ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.