ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ನಗರದ ವಿವಿಧೆಡೆ ಶುಕ್ರವಾರ ಸಂಭ್ರಮದಿಂದ ಆಚರಿಸಿ, ಬೆಂಗಳೂರಿಗೆ ಅವರು ನೀಡಿದ ಕೊಡುಗೆ ಹಾಗೂ ಅವರ ದೂರದೃಷ್ಟಿ ಚಿಂತನೆಗಳನ್ನು ಸ್ಮರಿಸಲಾಯಿತು.
ರಾಜ್ಯ ಸರ್ಕಾರ, ಬಿಬಿಎಂಪಿ ಜತೆಗೆ ವಿವಿಧ ಸಂಘ–ಸಂಸ್ಥೆಗಳು ಅದ್ದೂರಿಯಾಗಿ ಕೆಂಪೇಗೌಡರ ಜಯಂತಿ ಆಚರಿಸಿದವು. ನಗರದ ವಿವಿಧೆಡೆ ಕೆಂಪೇಗೌಡ ಅವರ ಪ್ರತಿಮೆಗೆ ಮಾಲಾರ್ಪಣೆ, ಪುಷ್ಪನಮನ ಸಲ್ಲಿಸಲಾಯಿತು. ವಿಜಯಸೇನೆ ವತಿಯಿಂದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಯಂತಿ ಆಚರಿಸಲಾಯಿತು. ಮಂಟಪ ನಿರ್ಮಿಸಿ ಕೆಂಪೇಗೌಡರ ಪ್ರತಿಮೆಯನ್ನು ಇರಿಸಲಾಗಿತ್ತು.
ಕೆ.ಆರ್.ರಸ್ತೆಯಲ್ಲಿರುವ ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ಜಾನಪದ ಕಲಾ ತಂಡಗಳ ನೃತ್ಯ ವೈಭವದೊಂದಿಗೆ ಆಚರಿಸಲಾಯಿತು. ಸಂಘದ ಆವರಣದಲ್ಲಿದ್ದ ಕೆಂಪೇಗೌಡರ ಪುತ್ಥಳಿಗೆ ಕ್ರೇನ್ ಮೂಲಕ ಹಾರ ಹಾಕಿ ನಮಿಸಲಾಯಿತು. ಬಳಿಕ ನಡೆದ ಮೆರವಣಿಗೆಗೆ ಡೊಳ್ಳು ಕುಣಿತ, ಕಂಸಾಳೆ, ವೀರಗಾಸೆ ಸೇರಿ ವಿವಿಧ ಜಾನಪದ ಕಲಾ ಪ್ರಕಾರಗಳು ಮೆರುಗು ನೀಡಿದವು. ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.
ಕೆಂಪೇಗೌಡರ ಹೆಸರಿಡಿ: ‘ಬೆಂಗಳೂರಿನ ಯಾವುದಾದರೂ ಒಂದು ವಿಶ್ವವಿದ್ಯಾಲಯಕ್ಕೆ ಕೆಂಪೇಗೌಡರ ಹೆಸರು ಇಡಬೇಕು. ನ್ಯಾಷನಲ್ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ಕೆಂಪೇಗೌಡ ವೈದ್ಯಕೀಯ ಕಾಲೇಜು ನಿಲ್ದಾಣ ಎಂಬುದಾಗಿ ನಾಮಕರಣ ಮಾಡಬೇಕು’ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅವರು ಒತ್ತಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.
‘ಬೆಂಗಳೂರು ನಗರವನ್ನು ನಿರ್ಮಿಸಿದ ಕೆಂಪೇಗೌಡರು, ಕೆರೆಗಳು ಮತ್ತು ಸಾಲು ಮರಗಳಿಂದ ತಂಪಾದ ಹವೆ ಉಂಟಾಗುವಂತೆ ಅತ್ಯಂತ ಮಾದರಿಯಾಗಿ ನಗರವನ್ನು ನಿರ್ಮಿಸಿದ್ದಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹೇಶ ಜೋಶಿ ಬಣ್ಣಿಸಿದರು.
ಚಿಲುಮೆ ಪ್ರತಿಷ್ಠಾನ: ಚಿಲುಮೆ ರವಿಕುಮಾರ್ ಪ್ರತಿಷ್ಠಾನದ ವತಿಯಿಂದ ಹಮ್ಮಿಕೊಂಡಿದ್ದ ಮೂರು ದಿನಗಳ ಕಾರ್ಯಕ್ರಮ ಸಂಪನ್ನಗೊಂಡಿತು. ಅವೆನ್ಯೂ ರಸ್ತೆಯ ದೊಡ್ಡಪೇಟೆ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಕೆಂಪೇಗೌಡರ ವೇಷಧಾರಿ ಗಮನ ಸೆಳೆದರು. ನಗರದ ನಿರ್ಮಾಣದ ಬಗ್ಗೆ ಕೆಂಪೇಗೌಡರು ಹೊಂದಿದ್ದ ಪರಿಕಲ್ಪನೆ ಆಧರಿಸಿ ಅಭಿನಯ ಪ್ರಸ್ತುತ ಪಡಿಸಲಾಯಿತು.
ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ಹಣ್ಣುಹಂಪಲು, ಬ್ರೆಡ್, ಬಿಸ್ಕೆಟ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.