ADVERTISEMENT

ಬೆಂಗಳೂರು: ಮಗು ಅಪಹರಿಸಿದ್ದ ಮಹಿಳೆಯರ ಬಂಧನ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2025, 14:20 IST
Last Updated 2 ನವೆಂಬರ್ 2025, 14:20 IST
<div class="paragraphs"><p>ಬಂಧನ  </p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಾಲ್ಕು ವರ್ಷದ ಮಗುವನ್ನು ಅಪಹರಿಸಿದ್ದ ಪ್ರಕರಣ ಸಂಬಂಧ ಇಬ್ಬರು ಮಹಿಳೆಯರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಯಶವಂತಪುರದ ಎಚ್‌ಎಂಟಿ ಕಾಲೋನಿ ನಿವಾಸಿ ಹೇಮಾವತಿ (43) ಮತ್ತು ಹುಣಸಮಾರನಹಳ್ಳಿ ನಿವಾಸಿ ಖುರ್ಷಿದ್‌ ಅಲಿಯಾಸ್‌ ಕಮಲಾ (40) ಬಂಧಿತರು. ಮಗುವನ್ನು ಪೋಷಕರ ಮಡಿಲಿಗೆ ಸೇರಿಸಲಾಗಿದೆ.

ಆರೋಪಿಗಳು ಅಕ್ಟೋಬರ್ 25ರಂದು ಯಾದಗಿರಿಯವರಾದ ಅಮರಯ್ಯ ಅವರ ನಾಲ್ಕು ವರ್ಷದ ಮಗು ಸಿದ್ಧಾರ್ಥನನ್ನು ಅಪಹರಿಸಿದ್ದರು. ಆರೋಪಿಗಳ ಪೈಕಿ ಹೇಮಾವತಿಗೆ ಈಗಾಗಲೇ ಎರಡು ಮದುವೆಯಾಗಿದ್ದು, ಇಬ್ಬರು ಸಹ ದೂರವಾಗಿದ್ದಾರೆ. ಇತ್ತೀಚೆಗೆ ಇಬ್ಬರು ಮಕ್ಕಳಿರುವ ವ್ಯಕ್ತಿಯನ್ನು ಮೂರನೇ ಮದುವೆಯಾಗಿದ್ದರು. ಕೌಟುಂಬಿಕ ಕಾರಣಕ್ಕೆ ಆ ವ್ಯಕ್ತಿಯಿಂದಲೂ ದೂರವಾಗಿ ಹುಣಸಮಾರನಹಳ್ಳಿಯಲ್ಲಿರುವ ತನ್ನ ಮನೆಯನ್ನು ಮಾರಾಟ ಮಾಡಿ ಎಚ್‌ಎಂಟಿ ಲೇಔಟ್‌ನಲ್ಲಿ ಒಬ್ಬರೇ ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಈ ಮಧ್ಯೆ ಮಕ್ಕಳಾಗದಕ್ಕೆ ಬೇಸರಗೊಂಡಿದ್ದರಿಂದ ಹೇಮಾವತಿ, ಆಗಾಗ್ಗೆ ಹುಣಸಮಾರನಹಳ್ಳಿಗೆ ಹೋಗುತ್ತಿದ್ದರು. ಆಗ ಖುರ್ಷಿದ್‌ ಅವರ ಪರಿಚಯವಾಗಿದ್ದು, ‘ಯಾವುದಾದರೂ ಮಗು ಇದ್ದರೆ ಕೊಡಿಸಿ, ದತ್ತು ಪಡೆದುಕೊಳ್ಳುತ್ತೇನೆ’ ಎಂದಿದ್ದರು. ಆಗ ಖರ್ಷಿದ್, ಅಕ್ಟೋಬರ್ 25ರಂದು ಮನೆ ಮುಂದೆ ಆಟವಾಡುತ್ತಿದ್ದ ಅಮರಯ್ಯ ಅವರ ಮಗುವಿಗೆ ಚಾಕೊಲೇಟ್‌ ತೋರಿಸಿ ಕರೆದೊಯ್ದು ಹೇಮಾವತಿಗೆ ಕೊಟ್ಟಿದ್ದರು. ಈ ದೃಶ್ಯ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು ಎಂದು ಪೊಲೀಸರು ಹೇಳಿದರು.

ಸ್ಥಳೀಯ ಯುವಕನೊಬ್ಬ ಖುರ್ಷಿದ್‌ ಬಗ್ಗೆ ಮಾಹಿತಿ ನೀಡಿದ್ದ. ಕೂಡಲೇ ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು.

ಆರೋಪಿಯು ಮಗುವನ್ನು ಕೊಡಲು ಹೇಮಾವತಿಯಿಂದ ₹ 1.10 ಲಕ್ಷ ನಗದು ಪಡೆದುಕೊಂಡಿದ್ದರು. ‘ಈ ಹಣವನ್ನು ಮಗುವಿನ ಪೋಷಕರಿಗೆ ನೀಡುತ್ತೇನೆ. ಮಗು ಕೊಂಡೊಯ್ಯುವುದರಿಂದ ತೊಂದರೆ ಇಲ್ಲ ಎಂದು ಹೇಳಿ ಕಳುಹಿಸಿದ್ದರು’ ಎಂದು ಪೊಲೀಸರು ಹೇಳಿದರು. 

ಈ ಸಂಬಂಧ ಚಿಕ್ಕಜಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.