ADVERTISEMENT

ವಂಚನೆ ಜಾಲ: ಪರರ ಸ್ವತ್ತು ಮಾರಾಟಕ್ಕೆ ನಕಲಿ ಮಾಲೀಕರ ಸೃಷ್ಟಿ

ಬೆಂಗಳೂರಲ್ಲಿ ಜಮೀನು ಕೊಡಿಸುವುದಾಗಿ ವಂಚನೆ

ಆದಿತ್ಯ ಕೆ.ಎ
Published 15 ಸೆಪ್ಟೆಂಬರ್ 2025, 23:30 IST
Last Updated 15 ಸೆಪ್ಟೆಂಬರ್ 2025, 23:30 IST
<div class="paragraphs"><p>&nbsp;ವಂಚನೆ–ಪ್ರಾತಿನಿಧಿಕ ಚಿತ್ರ</p></div>

 ವಂಚನೆ–ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ನಿವೇಶನ ಹಾಗೂ ಭೂಮಿ ಖರೀದಿಸಲು ಹೆಚ್ಚಿನವರು ಆಸಕ್ತಿ ತೋರುತ್ತಿದ್ದು, ನಗರದ ಹೊರವಲಯದಲ್ಲಿ ರಿಯಲ್‌ ಎಸ್ಟೇಟ್ ವಹಿವಾಟು ಭಾರಿ ಪ್ರಮಾಣದಲ್ಲಿ ಪ್ರಗತಿ ಕಂಡಿದೆ. ನಿವೇಶನ ಖರೀದಿದಾರರ ಸಂಖ್ಯೆ ಹೆಚ್ಚಾದಂತೆಯೇ ವಂಚನೆ ಜಾಲವೂ ರಾಜಧಾನಿಯಲ್ಲಿ ಮತ್ತೆ ಸಕ್ರಿಯವಾಗಿದೆ. 

ದಾಖಲಾತಿ ಪರಿಶೀಲನೆ ನಡೆಸದೇ ನಿವೇಶನ ಖರೀದಿಸಲು ಮುಂಗಡ ಹಣ ಪಾವತಿಸಿ ಹಣ ಕಳೆದುಕೊಳ್ಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಹಣ ಕಳೆದುಕೊಂಡವರು ಪೊಲೀಸ್‌ ಠಾಣೆಯ ಮೆಟ್ಟಿಲೇರುತ್ತಿದ್ದಾರೆ.

ADVERTISEMENT

ಈ ಸಂಬಂಧ ನಗರದ 11 ಉಪ ವಿಭಾಗದ ವಿವಿಧ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಕಳೆದ ಒಂದು ತಿಂಗಳಲ್ಲೇ 30ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ದೊಡ್ಡ ಮೊತ್ತದ ವಂಚನೆ ನಡೆದಿದ್ದ ಪ್ರಕರಣಗಳನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ ಎಂದು ಮೂಲಗಳು ಹೇಳಿವೆ.

ಸ್ಥಿರಾಸ್ತಿಯ ಮೇಲೆ ಹೂಡಿಕೆ ಮಾಡಿದರೆ ಹಣ ಸುರಕ್ಷಿತ ಎನ್ನುವ ಭಾವನೆಯಿಂದ ಹಲವರು ನೆಲಮಂಗಲ, ದೇವನಹಳ್ಳಿ, ಕಗ್ಗಲೀಪುರ, ಕನಕಪುರ ರಸ್ತೆ, ಸೋಮನಹಳ್ಳಿ, ಚಲ್ಲಘಟ್ಟ, ಹೆಸರಘಟ್ಟ, ಬಾಗಲೂರು, ನೈಸ್‌ ರಸ್ತೆಯ ಸುತ್ತಮುತ್ತ ನಿವೇಶನ ಖರೀದಿಸಲು ಆಸಕ್ತಿ ತೋರುತ್ತಿದ್ದಾರೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ವಂಚಕರು ಹಾಗೂ ರೌಡಿಗಳು ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದಾರೆ. ಅಲ್ಲದೇ ನಕಲಿ ಮಾಲೀಕರನ್ನೂ ಸೃಷ್ಟಿಸುತ್ತಿದ್ದಾರೆ ಎಂಬುದು ಪೊಲೀಸ್‌ ತನಿಖೆಯಿಂದ ಗೊತ್ತಾಗಿದೆ. ರಿಯಲ್‌ ಎಸ್ಟೇಟ್‌ ವ್ಯವಹಾರಕ್ಕೆ ಸಂಬಂಧಿಸಿದಂತೆ ಕೊಲೆ, ಕೊಲೆ ಯತ್ನ ಪ್ರಕರಣಗಳೂ ನಡೆಯುತ್ತಿವೆ.

ನಗರದ ಹಲವು ಭಾಗಗಳಲ್ಲಿ ಯಾರದ್ದೋ ನಿವೇಶನ ತೋರಿಸಿ ಹಣ ಪಡೆದು ವಂಚನೆ ಮಾಡುತ್ತಿರುವವರ ಜಾಲ ಸಕ್ರಿಯವಾಗಿದೆ. ಅಲ್ಲದೇ ಒಂದೇ ನಿವೇಶನವನ್ನು ಇಬ್ಬರಿಗೆ ಮಾರಾಟ ಮಾಡಿರುವುದು ಹಾಗೂ ಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ನಿವೇಶನ ತೋರಿಸಿ ಮಾರಾಟ ಮಾಡುತ್ತಿರುವ ಪ್ರಕರಣಗಳೂ ವರದಿ ಆಗುತ್ತಿವೆ. ದಾಖಲೆ ಪರಿಶೀಲನೆ ನಡೆಸದೇ ನಿವೇಶನ ಖರೀದಿಸುವ ಆಸೆಗೆ ಬಿದ್ದು, ಹಣ ಕಳೆದುಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ಮೂಲಗಳು ಹೇಳಿವೆ.

ಸಿಸಿಬಿಯಿಂದ ತನಿಖೆ ಚುರುಕು: ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಗೋವಾ ರಾಜ್ಯದ ಪ್ರಮುಖ ಸ್ಥಳದಲ್ಲಿ ಜಮೀನು ಕೊಡಿಸುವುದಾಗಿ ನಂಬಿಸಿ, ₹31.34 ಕೋಟಿ ವಂಚನೆ ನಡೆಸಲಾಗಿದ್ದು, ಈ ಸಂಬಂಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣ ಕಳೆದುಕೊಂಡ ಸುರೇಶ್ ಜೈನ್‌ ಹಾಗೂ ಬಾದಲ್‌ ಜೈನ್‌ ಎಂಬುವವರು ದೂರು ನೀಡಿದ್ದು, ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.

ನಾಗವಾರ, ಕಾಡುಗೋಡಿ, ವಿಕ್ಟೋರಿಯಾ ಲೇಔಟ್‌, ಪಿಳ್ಳಪ್ಪ ಗಾರ್ಡನ್‌ನ 12 ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಆರೋಪಿಗಳೆಲ್ಲರೂ ಪರಿಚಯಸ್ಥರು, ಒಂದು ತಂಡವಾಗಿ ಕೆಲಸ ಮಾಡುತ್ತಿದ್ದರು ಎಂಬುದು ಇದುವರೆಗೂ ನಡೆದ ತನಿಖೆಯಿಂದ ಗೊತ್ತಾಗಿದೆ. ಸ್ವತ್ತಿನ ಮಾಲೀಕರಲ್ಲದ ವ್ಯಕ್ತಿಗಳನ್ನು ಕರೆತಂದು, ಅವರೇ ನಿಜವಾದ ಮಾಲೀಕರು ಎಂದು ಆರೋಪಿಗಳು ನಂಬಿಸುತ್ತಿದ್ದರು. ನಕಲಿ ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದ ಆರೋಪಿಗಳು, ಅಗ್ರಿಮೆಂಟ್‌, ಸೇಲ್‌ ಡೀಡ್‌ ಮಾಡಿಕೊಡುತ್ತೇವೆ ಎಂದು ನಂಬಿಸುತ್ತಿದ್ದರು. ಸೆ.6ರಂದು ದಾಖಲಾದ ಪ್ರಕರಣದಲ್ಲಿ ಸೈಯದ್ ಫರಾತ್‌ ಉಲ್ಲಾ, ನಾಜೀಯ ಜಾನ್‌, ಮಧುರನಾಥ್‌, ಶ್ರೀನಿವಾಸ್, ಗೌತಮ್‌ ಜೈನ್‌, ಎಂ.ಶಂಕರ್, ಪ್ರದೀಪ್‌, ಜೋಶಿ, ಸೈಫ್‌, ಸೋಮು, ಜಮೀರ್ ಉಲ್ಲಾ ಖಾನ್‌, ಪರೀಷ್‌ ಎಂಬುವವರು ₹31.34 ಕೋಟಿ ಪಡೆದುಕೊಂಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಹಣ ವರ್ಗಾವಣೆ ಆಗಿರುವ ದಾಖಲೆಗಳನ್ನು ದೂರುದಾರರಿಂದ ಪಡೆದುಕೊಂಡು ತನಿಖೆ ನಡೆಸಲಾಗುತ್ತಿದೆ’ ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.