
ಬೆಂಗಳೂರು: ಸಹಜೀವನ ನಡೆಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ಲಲಿತಾ (49) ಕೊಲೆಯಾದ ಮಹಿಳೆ. ಲಕ್ಷ್ಮಿ ನಾರಾಯಣ (51) ಆತ್ಮಹತ್ಯೆ ಮಾಡಿಕೊಂಡವರು.
ಲಲಿತಾ ಅವರ ಪತಿ 15 ವರ್ಷಗಳ ಹಿಂದೆ ಮೃತಪಟ್ಟಿದ್ದರು. ಲಕ್ಷ್ಮಿ ನಾರಾಯಣ ಅವರೂ ಪತ್ನಿಯಿಂದ ದೂರವಾಗಿ ಪ್ರತ್ಯೇಕವಾಗಿ ನೆಲಸಿದ್ದರು. ಈ ನಡುವೆ ಲಲಿತಾ ಹಾಗೂ ಲಕ್ಷ್ಮಿ ನಾರಾಯಣ ಪರಿಚಿತರಾಗಿದ್ದರು. ಬಾಡಿಗೆಗೆ ಮನೆ ಪಡೆದು ಇಬ್ಬರೂ ಸಹಜೀವನ ನಡೆಸುತ್ತಿದ್ದರು ಎಂದು ಪೊಲೀಸರು ಹೇಳಿದರು.
ಲಲಿತಾ ಅವರು ಇತ್ತೀಚೆಗೆ ಬೇರೆ ವ್ಯಕ್ತಿಯ ಜತೆಗೆ ಮೊಬೈಲ್‌ನಲ್ಲಿ ಹೆಚ್ಚು ಸಮಯ ಮಾತನಾಡುತ್ತಿದ್ದರು. ಈ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆ ನಡೆಯುತ್ತಿತ್ತು. ಮಂಗಳವಾರ ಬೆಳಿಗ್ಗೆಯೂ ಇಬ್ಬರ ಮಧ್ಯೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿದ್ದು, ಅದೇ ಕೋಪದಲ್ಲಿ ಲಕ್ಷ್ಮಿ ನಾರಾಯಣ ಅವರು ದುಪ್ಪಟದಿಂದ ಬಿಗಿದು ಮಹಿಳೆಯನ್ನು ಕೊಲೆ ಮಾಡಿದ್ದಾರೆ. ನಂತರ, ಅದೇ ದುಪ್ಪಟದಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದರು.
ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ರಾಜಗೋಪಾಲನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಿಕ್ಟೋರಿಯಾ ಅಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.