ADVERTISEMENT

ಬೆಂಗಳೂರು: ಲಕ್ಕಿ ಡಿಪ್ ಘೋಷಣೆ– ಪೋಥಿಸ್‌ಗೆ ₹1 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 20:27 IST
Last Updated 9 ಡಿಸೆಂಬರ್ 2024, 20:27 IST
<div class="paragraphs"><p>ಆದೇಶ</p></div>

ಆದೇಶ

   

ಬೆಂಗಳೂರು: ‘ಕನ್ನಡ ರಾಜ್ಯೋತ್ಸವದ ಅಂಗವಾಗಿ ಗ್ರಾಹಕರನ್ನು ಸೆಳೆಯಲು ಲಕ್ಕಿ ಡಿಪ್ ಘೋಷಣೆ ಮಾಡಿ ಅದನ್ನು ಡ್ರಾ ಮಾಡದೆ ವಂಚಿಸುವ ಮೂಲಕ ಅನ್ಯಾಯದ ವ್ಯಾಪಾರ ನಡೆಸಲಾಗಿದೆ’ ಎಂಬ ಆರೋಪದಡಿ ನಗರದ ಪ್ರತಿಷ್ಠಿತ ಪೋಥಿಸ್‌ ಚಿಲ್ಲರೆ ವ್ಯಾಪಾರ ಲಿಮಿಟೆಡ್‌, ‘ಗ್ರಾಹಕರ ಕಲ್ಯಾಣ ನಿಧಿಗೆ ₹1 ಲಕ್ಷ ಪಾವತಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಆದೇಶಿಸಿದೆ.

ಈ ಸಂಬಂಧ ಜಾಲಹಳ್ಳಿ ಲೇ ಔಟ್‌ನ ಬಿಇಎಲ್‌ ರಸ್ತೆಯ ನಿವಾಸಿ ಎಚ್.ಕೆ.ಶ್ರೀನಿವಾಸ್‌ (62) ಸಲ್ಲಿಸಿದ್ದ ದೂರನ್ನು ವೇದಿಕೆಯ ಅಧ್ಯಕ್ಷೆ ಎಂ.ಶೋಭಾ, ಸದಸ್ಯರಾದ ಕೆ.ಅನಿತಾ ಶಿವಕುಮಾರ್ ಮತ್ತು ಸುಮಾ ಅನಿಲ್‌ ಕುಮಾರ್ ಅವರಿದ್ದ ಪೀಠವು ವಿಚಾರಣೆ ನಡೆಸಿ ಭಾಗಶಃ ಪುರಸ್ಕರಿಸಿದೆ.

ADVERTISEMENT

ಶ್ರೀನಿವಾಸ್‌ ಅವರು ಖರೀದಿಸಿರುವ ಒಟ್ಟು ಮೊತ್ತದ ಜತೆಗೆ ಮಾನಸಿಕ ಹಿಂಸೆ ಅನುಭವಿಸಿದ್ದಾಗಿ ₹25 ಸಾವಿರ ಮತ್ತು ಕಾನೂನು ಹೋರಾಟಕ್ಕೆ ಪರಿಹಾರವಾಗಿ ₹5 ಸಾವಿರ ಸೇರಿದಂತೆ ಒಟ್ಟು ₹30 ಸಾವಿರ ಮೊತ್ತದ ಪರಿಹಾರ ಹಾಗೂ ಗ್ರಾಹಕರ ಕಲ್ಯಾಣ ನಿಧಿಗೆ ₹1 ಲಕ್ಷ ಪಾವತಿ ಮಾಡಬೇಕು. ಈ ಮೊತ್ತವನ್ನು ಆದೇಶದ ಪ್ರತಿ ದೊರೆತ 30 ದಿನಗಳಲ್ಲಿ ಪಾವತಿಸಬೇಕು. ಇಲ್ಲವಾದಲ್ಲಿ ವಾರ್ಷಿಕ ಶೇ10ರ ರಷ್ಟು ಬಡ್ಡಿ ದರದೊಂದಿಗೆ ಪಾವತಿಸಬೇಕಾಗುತ್ತದೆ’ ಎಂದು ಪೀಠವು ಎಚ್ಚರಿಸಿದೆ.

‘ಮಳಿಗೆಯಲ್ಲಿ ವ್ಯಾಪಾರ ಮಾಡಿದ್ದ ದೂರುದಾರರೂ ಆದ ಎಚ್.ಕೆ.ಶ್ರೀನಿವಾಸ್ 18 ಲಕ್ಕಿ ಕೂಪನ್‌ಗಳನ್ನು ಹೊಂದಿದ್ದು, ಪರಿಹಾರವನ್ನು ಪಡೆಯಲು ಅರ್ಹರಾಗಿದ್ದಾರೆ. ಈ 18 ಕೂಪನ್‌ಗಳಿಗೆ ₹1,782 ಮೊತ್ತವನ್ನು ಪಾವತಿಸಿದ್ದಾರೆ. ಪೋಥಿಸ್ ಇಷ್ಟೂ ಮೊತ್ತವನ್ನು ಹಿಂದಿರುಗಿಸುವ ಹೊಣೆಗಾರನಾಗಿದೆ’ ಎಂದು ಪೀಠವು ತಿಳಿಸಿದೆ. ‌

‘ಪ್ರಕರಣಕ್ಕೆ ಸಂಬಂಧಿಸಿದಂತೆ ಎದುರುದಾರರಾದ ಪೋಥಿಸ್‌ಗೆ ನೋಟಿಸ್ ಜಾರಿ ಮಾಡಿದರೂ ಅವರ ಪರವಾಗಿ ಯಾರೂ ಆಯೋಗದ ಮುಂದೆ ಹಾಜರಾಗಿ ತಮ್ಮನ್ನು ಸಮರ್ಥನೆ ಮಾಡಿಕೊಳ್ಳಲು ಮುಂದಾಗಿಲ್ಲ. ಆದ್ದರಿಂದ, ದೂರುದಾರರು ಆರೋಪಿಸಿರುವಂತೆ ಪೋಥಿಸ್‌ಗೆ ಅನ್ಯಾಯಾದ ವ್ಯಾಪಾರ ನಡೆಸುವ ಅಭ್ಯಾಸ ಇದೆ ಎಂಬ ಆರೋಪವನ್ನು ಗ್ರಾಹಕರ ರಕ್ಷಣಾ ಕಾಯ್ದೆ–2019 ಕಲಂ 39(1) (ಜಿ) ಅನುಸಾರ ಪರಿಗಣಿಸಲಾಗಿದೆ’ ಎಂದು ಪೀಠವು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.