ADVERTISEMENT

ಮಗಳ ಮದುವೆ ಮಾಡಿಕೊಡಲು ನಕಾರ: ಪ್ರಿಯತಮೆಯ ತಾಯಿಗೆ ಬೆಂಕಿ ಹಚ್ಚಿದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2025, 15:39 IST
Last Updated 29 ಡಿಸೆಂಬರ್ 2025, 15:39 IST
<div class="paragraphs"><p>ಬಂಧನ (ಸಾಂದರ್ಭಿಕ ಚಿತ್ರ)</p></div>

ಬಂಧನ (ಸಾಂದರ್ಭಿಕ ಚಿತ್ರ)

   

ಬೆಂಗಳೂರು: ಮಗಳನ್ನು ಮದುವೆ ಮಾಡಿಕೊಡಲು ನಿರಾಕರಿಸಿದ ಯುವತಿಯ ತಾಯಿಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಯನ್ನು ಬಸವೇಶ್ವರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಾಣೇಗುರುವನಹಳ್ಳಿ ನಿವಾಸಿ ಮುತ್ತು ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಮಿಳುನಾಡಿನ ಗೀತಾ, ಮಗಳ ಜತೆ ಸಾಣೇಗುರುವನಹಳ್ಳಿಯಲ್ಲಿ ವಾಸವಿದ್ದು, ಮನೆಯ ಸಮೀಪವೇ ಪ್ರಾವಿಷನ್ ಸ್ಟೋರ್ ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. ಆರೋಪಿ ಸಹ ಟೀ ಅಂಗಡಿ ಇಟ್ಟುಕೊಂಡಿದ್ದ. ಮಗಳು ಹಾಗೂ ಮುತ್ತುವಿನ ಪ್ರೀತಿಯ ವಿಚಾರ ತಿಳಿದಿದ್ದ ಅವರು, ಮಗಳನ್ನು ಆತನಿಗೆ ಕೊಟ್ಟು ಮದುವೆ ಮಾಡಲು ಮಾತುಕತೆ ನಡೆಸಿದ್ದರು. ಆರು ತಿಂಗಳಿನಿಂದ ಗೀತಾ ಅವರ ಮನೆಯಲ್ಲೇ ಆರೋಪಿ ವಾಸವಾಗಿದ್ದ. ಮದ್ಯವ್ಯಸನಿಯಾಗಿದ್ದ ಕಾರಣ ಆತನ ಜತೆ ಮಗಳ ಮದುವೆ ಮಾಡದಿರಲು ಇತ್ತೀಚೆಗೆ ಅವರು ನಿರ್ಧರಿಸಿದ್ದರು ಎಂದು ಪೊಲೀಸರು ತಿಳಿಸಿದರು.

ಈ ಕಾರಣಕ್ಕೆ ಕೋಪಗೊಂಡಿದ್ದ ಮುತ್ತು, ಅವರೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದ. ಸೋಮವಾರ ರಾತ್ರಿ ಜಗಳವಾಡಿದ್ದ. ಗೀತಾ ಅವರು ನಿದ್ದೆಗೆ ಜಾರಿದಾಗ ಆರೋಪಿ ಅವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದ. ತೀವ್ರ ಸುಟ್ಟ ಗಾಯಗಳಿಂದ ಅಸ್ವಸ್ಥಗೊಂಡಿರುವ ಗೀತಾ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಆರೋಪಿ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.