ಬೆಂಗಳೂರು: ಬಿಡಿಎ ವತಿಯಿಂದ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ಮಾಡಿ 14 ವರ್ಷದ ನಂತರ, ನಿವೇಶನ ಪಡೆದುಕೊಂಡಿರುವ ಬಿಬಿಎಂಪಿ ₹21.25 ಕೋಟಿ ವೆಚ್ಚದಲ್ಲಿ ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಿಸಲು ಮುಂದಾಗಿದೆ.
ಸರ್ ಎಂ. ವಿಶ್ವೇಶ್ವರಯ್ಯ ಬಡಾವಣೆಯ 2ನೇ ಬ್ಲಾಕ್‌ನಲ್ಲಿ ನಾಗರಿಕರ ನಿವೇಶನ ಸಂಖ್ಯೆ 2ರಲ್ಲಿ 3,432 ಚದರ ಮೀಟರ್ ವಿಸ್ತೀರ್ಣದಲ್ಲಿ 50 ಹಾಸಿಗೆಗಳ ತಾಯಿ–ಮಕ್ಕಳ ಆಸ್ಪತ್ರೆ ನಿರ್ಮಿಸಲು ಬಿಬಿಎಂಪಿ ಯೋಜನೆ ತಯಾರಿಸಿದೆ.
3278 ಚದರ ಮೀಟರ್ ವಿಸ್ತೀರ್ಣದಲ್ಲಿ ನೆಲ ಹಾಗೂ ಎರಡು ಅಂತಸ್ತುಗಳ ಕಟ್ಟಡ ನಿರ್ಮಿಸಲು ಯೋಜಿಸಲಾಗಿದ್ದು, ಸಿವಿಲ್ ಕೆಲಸಗಳಿಗೆ ₹10.49 ಕೋಟಿ ವೆಚ್ಚವಾಗಲಿದೆ. ಅಗ್ನಿಶಾಮಕ, ಲಿಫ್ಟ್, ಸಿಸಿಟಿವಿ ಕ್ಯಾಮೆರಾ, ದೂರವಾಣಿ, ಯುಪಿಎಸ್ ವ್ಯವಸ್ಥೆ ಇತ್ಯಾದಿಗಳಿಗೆ ₹1.48 ಕೋಟಿ, ಮಾದರಿ ಶಸ್ತ್ರಚಿಕಿತ್ಸೆ ಘಟಕ, ವೈದ್ಯ ಗ್ಯಾಸ್ ಕೊಳವೆ ಮಾರ್ಗ, ಪೀಠೋಪಕರಣಕ್ಕೆ ₹1.61 ಕೋಟಿ, ಎಲೆಕ್ಟ್ರಿಕಲ್, ನೀರು, ಎಸ್‌ಟಿಪಿ, ಕೊಳವೆಬಾವಿ ಸೇರಿದಂತೆ ಮೂಲಸೌಕರ್ಯಕ್ಕೆ ₹1.94 ಕೋಟಿ, ವೈದ್ಯಕೀಯ ಉಪಕರಣಗಳಿಗೆ ₹70 ಲಕ್ಷ, ಟೆಂಡರ್ ಪ್ರೀಮಿಯಂಗೆ ₹1.55 ಕೋಟಿ, ಯೋಜನಾ ನಿರ್ವಹಣೆ ಸಲಹೆಗಾರರಿಗೆ ₹7.76 ಲಕ್ಷ, ಜಿಎಸ್‌ಟಿ ₹3.21 ಕೋಟಿ ಹಾಗೂ ಇತರೆ ವೆಚ್ಚಗಳೂ ಸೇರಿ ₹21.25 ಕೋಟಿ ವೆಚ್ಚವಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಎಂಜಿನಿಯರ್‌ಗಳು ಬಿಬಿಎಂಪಿಗೆ ವರದಿ ನೀಡಿದ್ದಾರೆ.
‘ಉಪ ಮುಖ್ಯಮಂತ್ರಿಯವರ ಸೂಚನೆಯಂತೆ ಆಸ್ಪತ್ರೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಯೋಜನೆ ರೂಪಿಸಲಾಗಿದ್ದು, ಶೀಘ್ರವೇ ಟೆಂಡರ್ ಕರೆಯಲಾಗುತ್ತದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.
‘ವಿಶ್ವೇಶ್ವರಯ್ಯ 2ನೇ ಬ್ಲಾಕ್‌ನಲ್ಲಿ ಬಿಡಿಎ ನೀಡಿರುವ ನಾಗರಿಕ ಸೌಲಭ್ಯ ನಿವೇಶನದಲ್ಲಿ ಬಿಬಿಎಂಪಿ ವತಿಯಿಂದಲೇ ಆಸ್ಪತ್ರೆ ನಿರ್ಮಾಣ ಮಾಡಲಾಗುತ್ತದೆ. ನಂತರ ಅದನ್ನು ಆರೋಗ್ಯ ಇಲಾಖೆಗೆ ಹಸ್ತಾಂತರಿಸುವ ಬಗ್ಗೆ ಆಲೋಚಿಸಲಾಗುತ್ತದೆ’ ಎಂದು ವಿಧಾನ ಪರಿಷತ್‌ನಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಗುರುವಾರ ತಿಳಿಸಿದರು.
ಕಾಂಗ್ರೆಸ್‌ನ ಉಮಾಶ್ರೀ ಅವರ ಪ್ರಶ್ನೆಗೆ ಉತ್ತರಿಸಿದ್ದ ಅವರು, ಆಸ್ಪತ್ರೆಯನ್ನು ಶೀಘ್ರವಾಗಿ ನಿರ್ಮಿಸಲಾಗತ್ತದೆ ಎಂಬ ಭರವಸೆ ನೀಡಿದರು.
‘ಆಸ್ಪತ್ರೆಗೆ ನಿವೇಶನ ಪಡೆದುಕೊಳ್ಳಲು ವಿಳಂಬಧೋರಣೆ ಅನುಸರಿಸಿದ ಅಧಿಕಾರಿಗಳ ಮೇಲೆ ಕ್ರಮವಾಗಬೇಕು’ ಎಂದು ಉಮಾಶ್ರೀ ಆಗ್ರಹಿಸಿದರು. ‘ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಶಿವಕುಮಾರ್ ಹೇಳಿದರು.
ಬಿಡಿಎ ಸಿಎ ನಿವೇಶನವನ್ನು 2011ರ ಜನವರಿ 6ರಂದು ಬಿಬಿಎಂಪಿಗೆ ಹಂಚಿಕೆ ಪತ್ರ ನೀಡಿತ್ತು. ಇದಾಗಿ 11 ವರ್ಷವಾದರೂ ಬಿಬಿಎಂಪಿ ನಿವೇಶನ ಪಡೆದುಕೊಂಡಿರಲಿಲ್ಲ. ಈ ಬಗ್ಗೆ ‘ಪ್ರಜಾವಾಣಿ’ಯಲ್ಲಿ 2022ರ ಅಕ್ಟೋಬರ್ 7ರಂದು ‘ಬಿಬಿಎಂಪಿ ಮರೆತ ಆಸ್ಪತ್ರೆ ನಿವೇಶನ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು. ಇದಾದ ನಂತರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮಧ್ಯಪ್ರವೇಶದ ನಂತರ ಗುತ್ತಿಗೆ ಹಣ ಪಾವತಿಸಿತ್ತು. ಬಿಬಿಎಂಪಿ 2024ರ ಜನವರಿ 17ರಂದು ಸಿಎ ನಿವೇಶನಕ್ಕಾಗಿ ₹1.71 ಕೋಟಿಯನ್ನು ಬಿಡಿಎಗೆ ಪಾವತಿಸಿತ್ತು. ಆದರೆ ಬಿಬಿಎಂಪಿ ರಾಜರಾಜೇಶ್ವರಿ ನಗರ ವಲಯದ ಅಧಿಕಾರಿಗಳು ಈ ನಿವೇಶನ ನೋಂದಣಿ ಬಗ್ಗೆ ಕ್ರಮಕೈಗೊಂಡಿರಲಿಲ್ಲ. ಈ ಬಗ್ಗೆ ಪ್ರಜಾವಾಣಿಯಲ್ಲಿ ‘ಆಸ್ಪತ್ರೆ ನಿವೇಶನ ನೋಂದಣಿಗೆ ನಿರ್ಲಕ್ಷ್ಯ’ ಶೀರ್ಷಿಕೆಯಡಿ 2025ರ ಜೂನ್ 21ರಂದು ವಿಶೇಷ ವರದಿ ಪ್ರಕಟವಾಗಿತ್ತು. ನಂತರ ರಾಜರಾಜೇಶ್ವರಿ ನಗರ ವಲಯ ಆಯುಕ್ತ ಸತೀಶ್ ಅವರ ಸೂಚನೆಯಂತೆ ಬಿಡಿಎಯೊಂದಿಗೆ 30 ವರ್ಷಗಳ ಗುತ್ತಿಗೆ ಕರಾರನ್ನು ಬಿಬಿಎಂಪಿ ಅಧಿಕಾರಿಗಳು ಜುಲೈ 22ರಂದು ಮಾಡಿಕೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.