ADVERTISEMENT

ಬೆಂಗಳೂರು: ಉಪನಗರಗಳಿಗೆ ಮೆಮು ರೈಲು

​ಪ್ರಜಾವಾಣಿ ವಾರ್ತೆ
Published 16 ಜೂನ್ 2022, 20:13 IST
Last Updated 16 ಜೂನ್ 2022, 20:13 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನಗರಕ್ಕೆ ಭೇಟಿ ನೀಡುವ ದಿನವೇ(ಜೂನ್ 20) ನಗರದ ಸುತ್ತಲಿನ ಉಪನಗರಗಳಿಗೆ ರೈಲುಗಳನ್ನು ಪುನರಾರಂಭಿಸಲು ನೈರುತ್ಯ ರೈಲ್ವೆ ನಿರ್ಧರಿಸಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ(ಕೆಎಸ್‌ಆರ್) ರೈಲು ನಿಲ್ದಾಣದಿಂದ ರಾಮನಗರಕ್ಕೆ(01763/01764) ನಿತ್ಯ ಮೆಮು ಎಕ್ಸ್‌ಪ್ರೆಸ್ ಪರಿಚಯಿಸಿದ್ದು, ಬೋಗಿಗಳ ಸಂಖ್ಯೆಯನ್ನು 8ರಿಂದ 16ಕ್ಕೆ ಹೆಚ್ಚಿಸಲಾಗಿದೆ. ಭಾನುವಾರ ಕೂಡ ಈ ರೈಲು ಸೇವೆ ಇರಲಿದೆ.

ಕೆಎಸ್‌ಆರ್‌ನಿಂದ ವೈಟ್‌ಫೀಲ್ಡ್‌ (01765/01766), ಕೆಎಸ್‌ಆರ್-ಕುಪ್ಪಂ (06529/06530), ಬಂಗಾರಪೇಟೆ-ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (06527/ 06528), ಯಶವಂತಪುರ-ತುಮಕೂರು (06579), ತುಮಕೂರು-ಯಶವಂತಪುರ (06574) ಹಾಗೂ ಕೆಎಸ್‌ಆರ್‌ನಿಂದ ಮೈಸೂರಿಗೆ (06525/ 06526) ನಿತ್ಯ 16 ಬೋಗಿಗಳ ಮೆಮು ರೈಲು ಸೇವೆ ಆರಂಭಿಸಲು ನಿರ್ಧರಿಸಿದೆ.

ADVERTISEMENT

ಕೆಎಸ್‌ಆರ್‌ನಿಂದ ಬಂಗಾರಪೇಟೆ (01769/ 01770) ಹಾಗೂ ಕಂಟೋನ್ಮೆಂಟ್‌ನಿಂದ ಬಂಗಾರಪೇಟೆಗೆ (06389/ 06390) ಎಂಟು ಬೋಗಿಗಳ ಡೆಮು ರೈಲು ವಾರದ ಆರು ದಿನಗಳು ಲಭ್ಯ ಇರಲಿದೆ. ಧರ್ಮಪುರಿ- ಕೆಎಸ್‌ಆರ್ (06278) ನಡುವಿನ ಡೆಮು ರೈಲಿನ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದ್ದು, ಜೂನ್ 20ರಿಂದ ಅನ್ವಯವಾಗಲಿದೆ ಎಂದು ನೈರುತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

‘ಎಲ್ಲಾ ನಿಲ್ದಾಣಗಳಲ್ಲೂ ನಿಲುಗಡೆ ಆಗುವ ಈ ರೈಲುಗಳಿಗೆ ಮೆಮು ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ. ಹಿಂದಿದ್ದ ರೈಲುಗಳ ಸೇವೆಯನ್ನೇ ಪುನರ್ ಆರಂಭಿಸಿ ಅದಕ್ಕೆ ಎಕ್ಸ್‌ಪ್ರೆಸ್‌ ಎಂದು ನಾಮಕರಣ ಮಾಡಿ ಪ್ರಯಾಣಿಕರು ದುಪ್ಪಟ್ಟು ದರ ತೆರುವಂತೆ ಮಾಡಲಾಗಿದೆ. ಇದು ಸರಿಯಲ್ಲ’ ಎಂದು ರೈಲ್ವೆ ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.