ADVERTISEMENT

Bengaluru | ನಮ್ಮ ಮೆಟ್ರೊ ನೀಲಿ ಮಾರ್ಗ: ಮುಗಿಯದ ಕಾಮಗಾರಿ: ತಪ್ಪದ ಕಿರಿಕಿರಿ

ನಮ್ಮ ಮೆಟ್ರೊ ನೀಲಿ ಮಾರ್ಗ: ಕೆ.ಆರ್‌.ಪುರ–ಹೆಬ್ಬಾಳ ನಡುವೆ ಆಮೆಗತಿಯಲ್ಲಿ ಸಾಗುತ್ತಿರುವ ಕೆಲಸ

ಬಾಲಕೃಷ್ಣ ‍ಪಿ.ಎಚ್‌.
Published 18 ಡಿಸೆಂಬರ್ 2025, 0:30 IST
Last Updated 18 ಡಿಸೆಂಬರ್ 2025, 0:30 IST
<div class="paragraphs"><p>ನಾಗವಾರದ ಹೊರವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ಕುಂಠಿತಗೊಂಡಿದ್ದು ಬುಧವಾರ ವಾಹನ ದಟ್ಟಣೆ ಕಂಡುಬಂತು. </p></div>

ನಾಗವಾರದ ಹೊರವರ್ತುಲ ರಸ್ತೆಯಲ್ಲಿ ನಮ್ಮ ಮೆಟ್ರೊ ಕಾಮಗಾರಿ ಕುಂಠಿತಗೊಂಡಿದ್ದು ಬುಧವಾರ ವಾಹನ ದಟ್ಟಣೆ ಕಂಡುಬಂತು.

   

ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಬೆಂಗಳೂರು: ನಮ್ಮ ಮೆಟ್ರೊ ನೀಲಿ ಮಾರ್ಗದಲ್ಲಿ ಕೆ.ಆರ್‌.ಪುರದಿಂದ ಹೆಬ್ಬಾಳದವರೆಗೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ಇದರಿಂದಾಗಿ ಈ ರಸ್ತೆಯಲ್ಲಿ ವಾಹನ ಸಂಚಾರವೇ ದುಸ್ತರವಾಗಿದೆ. ದಟ್ಟಣೆ ಅವಧಿಯಲ್ಲಿ ವಾಹನಗಳು ತಾಸುಗಟ್ಟಲೆ ನಿಂತು ತೆವಲುತ್ತಾ ಸಾಗುವಂತಾಗಿದೆ.

ADVERTISEMENT

ಕೆಂಪಾಪುರ, ವೀರಣ್ಣ ಪಾಳ್ಯ, ನಾಗವಾರ, ಮಾನ್ಯತಾ ಟೆಕ್‌ಪಾರ್ಕ್‌, ಕಸ್ತೂರಿನಗರ, ಬಾಬುಸಾ ಪಾಳ್ಯ (ಬಾಬು ಸಾಬ್‌ ಪಾಳ್ಯ), ಬೆನ್ನಿಗಾನಹಳ್ಳಿ, ಕೆ.ಆರ್‌. ಪುರವರೆಗೆ ಸಾಗುವುದೇ ಕಷ್ಟವಾಗಿದೆ. ಬುಧವಾರ ‘ಪ್ರಜಾವಾಣಿ’ ತಂಡ ಸ್ಥಳಕ್ಕೆ ಭೇಟಿ ನೀಡಿದಾಗ ವಾಹನಗಳ ಸಾಲುಗಳ ನಡುವೆ ಆಂಬುಲೆನ್ಸ್‌ ಸಿಲುಕಿಕೊಂಡಿತ್ತು. ಸೈರನ್‌ ಮಾತ್ರ ಒಂದೇ ಸಮನೆ ಹೊಡೆಯುತ್ತಿದ್ದರೂ ಮುಂದಕ್ಕೆ ಸಾಗಲು ಸಾಧ್ಯವಾಗಲಿಲ್ಲ. ಎರಡು ಕಿ.ಮೀ. ಸಾಗಲು ಸುಮಾರು ಮುಕ್ಕಾಲು ತಾಸು ತೆಗೆದುಕೊಂಡಿತು.

ಅತಿ ಹೆಚ್ಚು ವಾಹನದಟ್ಟಣೆಯ ಪ್ರದೇಶಗಳಲ್ಲಿ ಒಂದಾಗಿರುವ ಹೊರ ವರ್ತುಲ ರಸ್ತೆಯ (ಒಆರ್‌ಆರ್‌) ದಟ್ಟಣೆಯನ್ನು ಕಡಿಮೆ ಮಾಡಲು, ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುವವರಿಗೆ ಅನುಕೂಲ ಮಾಡಿಕೊಡಲು ರೂಪಿಸಿದ ‘ನೀಲಿ ಮಾರ್ಗ’ ಯೋಜನೆಯು ನಿಗದಿತ ಸಮಯದಲ್ಲಿ ಪೂರ್ಣಗೊಳ್ಳದೇ ಸಮಸ್ಯೆಯಾಗಿ ಕಾಡತೊಡಗಿದೆ.

ಕೇಂದ್ರ ರೇಷ್ಮೆ ಮಂಡಳಿಯಿಂದ (ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌) ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ 58 ಕಿ.ಮೀ. ಉದ್ದದ ಈ ಮಾರ್ಗವು ಎರಡು ಹಂತದಲ್ಲಿ 2024ರ ಒಳಗೆ ಪೂರ್ಣಗೊಳ್ಳಬೇಕಿತ್ತು.

ಕೋವಿಡ್‌ ಕಾರಣದಿಂದ ಕಾಮಗಾರಿಯು ತಡವಾಗಿ ಆರಂಭವಾಗಿದ್ದರಿಂದ ಪೂರ್ಣಗೊಳ್ಳುವ ಅವಧಿಯನ್ನು ಎರಡು ವರ್ಷ ವಿಸ್ತರಿಸಿ, ಗಡುವನ್ನು ಪುನರ್‌ನಿಗದಿ ಮಾಡಲಾಗಿತ್ತು. ರೇಷ್ಮೆ ಮಂಡಳಿಯಿಂದ ಕೆ.ಆರ್‌.ಪುರದವರೆಗೆ (ಹಂತ 2ಎ) 2021ರ ಆಗಸ್ಟ್‌ನಲ್ಲಿ ಹಾಗೂ ಕೆ.ಆರ್‌. ಪುರದಿಂದ ವಿಮಾನ ನಿಲ್ದಾಣದವರೆಗೆ (ಹಂತ 2ಬಿ) 2022ರ ಫೆಬ್ರುವರಿಯಲ್ಲಿ ಕಾಮಗಾರಿ ಆರಂಭವಾಗಿದ್ದು 2026ರ ಡಿಸೆಂಬರ್‌ ಒಳಗೆ ಮುಗಿಯಬೇಕಿದೆ.

ರೇಷ್ಮೆ ಮಂಡಳಿಯಿಂದ ಕೆ.ಆರ್‌.‍ ಪುರವರೆಗಿನ ಸಿವಿಲ್‌ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಹೆಬ್ಬಾಳದಿಂದ ವಿಮಾನ ನಿಲ್ದಾಣ ಕಡೆಗೂ ವೇಗವಾಗಿ ಕಾಮಗಾರಿ ನಡೆಯುತ್ತಿದೆ. ಹೆಬ್ಬಾಳ ಮತ್ತು ಕೆ.ಆರ್‌. ಪುರ ನಡುವೆಯೇ ಸಮಸ್ಯೆ ಉಂಟಾಗಿದ್ದು, ವಾಹನ ಸಂಚಾರ ಯಾತನಾಮಯವಾಗಿದೆ. 

‘ವೀರಣ್ಣಪಾಳ್ಯ ಮೇಲ್ಸೇತುವೆಯಲ್ಲಿ ಬೆಳಿಗ್ಗೆ ಅಥವಾ ಸಂಜೆ ದಟ್ಟಣೆಯ ಅವಧಿಯಲ್ಲಿ ಒಂದು ವಾಹನ ನಿಂತರೆ ಕೆಲವೇ ನಿಮಿಷದಲ್ಲಿ ನಾಲ್ಕು ಕಿ.ಮೀ. ಉದ್ದಕ್ಕೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ. ಮಧ್ಯಾಹ್ನವೂ ಒಂದೆರಡು ಕಿ.ಮೀ.ವರೆಗೆ ವಾಹನಗಳು ನಿಲ್ಲುತ್ತವೆ. ಮೆಟ್ರೊ ಕಾಮಗಾರಿ ಬೇಗ ಮುಗಿಸಿದ್ದರೆ ಹೀಗಾಗುತ್ತಿರಲಿಲ್ಲ. ಮಳೆಗಾಲ ಬಂತೆಂದರೆ ಹೆಬ್ಬಾಳ, ಕೆಂಪಾಪುರದಲ್ಲಿ ರಸ್ತೆಯಲ್ಲೇ ನೀರು ನಿಲ್ಲುತ್ತದೆ. ಪಾಲಿಕೆಯ ಯಾವ ಅಧಿಕಾರಿಗಳೂ ಬರುವುದಿಲ್ಲ. ನಾವೇ ಕಬ್ಬಿಣದ ಸಲಾಕೆ ಇಟ್ಟುಕೊಂಡು ಎಲ್ಲಿ ಬ್ಲಾಕ್‌ ಆಗಿದೆ ಎಂದು ನೋಡಿ ತ್ಯಾಜ್ಯ ಸರಿಸಿ ನೀರು ಹೋಗುವಂತೆ ಮಾಡುತ್ತೇವೆ’ ಎಂದು ಸಂಚಾರ ಪೊಲೀಸರು ತಿಳಿಸಿದರು.

‘ಈಗಲೇ ಹೀಗೆ. ಇನ್ನು ಕೆಲವೇ ದಿನಗಳಲ್ಲಿ ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿಯ ಕಾಮಗಾರಿಗಳು ಇಲ್ಲಿ ಆರಂಭಗೊಳ್ಳಲಿವೆ. ಮೆಟ್ರೊ ಕಾಮಗಾರಿಗೆ ಅಗೆದ ಬಳಿಕ ಉಳಿದಿರುವ ರಸ್ತೆಯನ್ನು ಅವರು ಅಗೆಯಲಿದ್ದಾರೆ. ಆ ನಂತರ ವಾಹನ ಸಂಚಾರವೇ ನಿಂತು ಹೋಗುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

15 ದಿನಗಳ ಈಚೆಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಎರಡು ಬಾರಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಒಂದು ಬಾರಿ ಇಲ್ಲೆಲ್ಲ ಬಂದು ಪರಿಶೀಲನೆ ನಡೆಸಿದ್ದಾರೆ. ಕೂಡಲೇ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದಾರೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ವಸ್ತುಸ್ಥಿತಿ ಏನೆಂದರೆ, ಇನ್ನು ಎರಡು ವರ್ಷವಾದರೂ ಕಾಮಗಾರಿ ಮುಗಿಯುವುದಿಲ್ಲ. ಬೇಕಾದರೆ ಕಾದು ನೋಡಿ ಎಂದು ಕೆಂಪಾಪುರದ ಸೈಯದ್‌ ಸವಾಲು ಹಾಕಿದರು.

ಹೆಬ್ಬಾಳ–ಕೆಂಪಾಪುರ ನಡುವೆ ಮೆಟ್ರೊ ಪಿಲ್ಲರ್‌ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ.  ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಮೆಟ್ರೊ ಕಾಮಗಾರಿಯಿಂದಾಗಿ ಅಗಲ ಕಡಿಮೆಗೊಂಡಿರುವ ನಾಗವಾರದ ಹೊರವರ್ತುಲ ರಸ್ತೆಯಲ್ಲಿ ನಿಧಾನವಾಗಿ ಸಾಗುತ್ತಿರುವ ವಾಹನಗಳು. ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಡಿಸಿಎಂ ಸಚಿವರಿಂದ ಎಚ್ಚರಿಕೆ

ನಿಗದಿತ ಸಮಯದೊಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಗುತ್ತಿಗೆದಾರರು ತಿಳಿಸಿದ್ದಾರೆ. ಅದರಂತೆ ಪೂರ್ಣಗೊಳಿಸದೇ ಇದ್ದರೆ ಗುತ್ತಿಗೆದಾರರಿಗೆ ಮುಂದೆ ಯಾವುದೇ ಕಾಮಗಾರಿ ನೀಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಸಿದ್ದರು. ‘ಎರಡು ವರ್ಷಗಳಲ್ಲಿ ಪಿಲ್ಲರ್‌ ನಿರ್ಮಿಸಲು ಸಾಧ್ಯವಾಗಿಲ್ಲ. ಎರಡು ತಿಂಗಳಲ್ಲಿ ಮ್ಯಾಜಿಕ್‌ ಮಾಡ್ತೀರಾ? ನನಗೆ ಪಿಲ್ಲರ್‌ ಕಾಣಿಸುತ್ತಿಲ್ಲ. ನಾನೇನು ಕುರುಡ ಅಂದುಕೊಂಡ್ರಾ? ಒಂದು ಪಿಲ್ಲರ್‌ ನಿರ್ಮಿಸಲು ಎರಡು ವರ್ಷ ಬೇಕಾ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಇದಾದ ನಂತರವೂ ಕಾಮಗಾರಿ ವೇಗ ಪಡೆದುಕೊಂಡಿಲ್ಲ. ಹೀಗಾಗಿ ನಿಗದಿತ ಗಡುವಿನ ಒಳಗೆ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ.

ವೀರಣ್ಣಪಾಳ್ಯದ ಹೊರವರ್ತುಲ ರಸ್ತೆಯಲ್ಲಿ ವಾಹನದಟ್ಟಣೆ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.
ಬಾಬುಸಾಪಾಳ್ಯದ ಹೊರವರ್ತುಲ ರಸ್ತೆಯಲ್ಲಿ ಸಾಲುಗಟ್ಟಿ ನಿಂತಿರುವ ವಾಹನಗಳ ನಡುವೆ ಸಂಚರಿಸಲು ಪರದಾಡಿದ ಆಂಬುಲೆನ್ಸ್‌ ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಮೇಲ್ಸೇತುವೆ ರಸ್ತೆಗಳೇ ನಿಧಾನಗತಿಗೆ ಕಾರಣ

ಕೆ.ಆರ್‌. ಪುರದಿಂದ ಹೆಬ್ಬಾಳದವರೆಗೆ ಹೊರ ವರ್ತುಲ ರಸ್ತೆಯಲ್ಲಿ ಹೆಚ್ಚು ಮೇಲ್ಸೇತುವೆ ರಸ್ತೆಗಳಿರುವುದರಿಂದ ಕಾಮಗಾರಿ ನಿಧಾನವಾಗಿದೆ. ಮೇಲ್ಸೇತುವೆಗಳನ್ನು ತಪ್ಪಿಸಿಕೊಂಡು ಗರ್ಡರ್‌ ಅಳವಡಿಸಬೇಕು. ಕ್ರೇನ್‌ ಹೋಗದ ಜಾಗಗಳಲ್ಲಿ ಬೇರೆ ವ್ಯವಸ್ಥೆಗಳನ್ನು ಮಾಡಬೇಕು. ಪ್ರಮುಖ ಜಂಕ್ಷನ್‌ಗಳಲ್ಲಿ ಕಾಂಪೋಸ್ಡ್‌ ಗರ್ಡರ್‌ ವೆಬ್‌ ಗರ್ಡರ್‌ಗಳನ್ನು ಹಾಕಲಾಗುತ್ತಿದೆ. ಈ ಎಲ್ಲ ಕಾರಣದಿಂದ ನಿಧಾನವಾಗಿದೆ ಎಂದು ನಮ್ಮ ಮೆಟ್ರೊ ಅಧಿಕಾರಿಗಳು ಮಾಹಿತಿ ನೀಡಿದರು. ‘ರೇಷ್ಮೆ ಮಂಡಳಿಯಿಂದ ಕೆ.ಆರ್. ಪುರದವರೆಗೆ ಮುಂದಿನ ವರ್ಷ ಸೆಪ್ಟೆಂಬರ್‌ನಲ್ಲಿ ಸಂಚಾರ ಆರಂಭಿಸಲಾಗುವುದು. ವಿಮಾನ ನಿಲ್ದಾಣದಿಂದ ಹೆಬ್ಬಾಳದವರೆಗೆ 2027ರ ಜೂನ್‌ನಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಹೆಬ್ಬಾಳದಿಂದ ಕೆ.ಆರ್‌. ಪುರ ನಡುವೆ ಅದೇ ವರ್ಷ ಡಿಸೆಂಬರ್‌ ಒಳಗೆ ಮೆಟ್ರೊ ಸಂಚಾರ ಆರಂಭಿಸಬೇಕು ಎಂಬ ಗುರಿ ಇಟ್ಟುಕೊಂಡಿದ್ದೇವೆ. ನಮ್ಮ ಮೆಟ್ರೊ ಸಂಚಾರ ಆರಂಭಗೊಂಡಾಗ ವಾಹನ ದಟ್ಟಣೆ ಸಮಸ್ಯೆ ಕಡಿಮೆಗೊಳ್ಳಲಿದೆ’ ಎಂದು ವಿವರಿಸಿದರು.

ಹೊರ ವರ್ತುಲ ರಸ್ತೆಯಲ್ಲಿ ಜಾಗ ಇದ್ದಲ್ಲೆಲ್ಲ ನುಗ್ಗುತ್ತಿದ್ದ ವಾಹನಗಳು ಪ್ರಜಾವಾಣಿ ಚಿತ್ರ: ಪ್ರಶಾಂತ್ ಎಚ್.ಜಿ.

ಜನರು ಏನಂತಾರೆ?

ನಮ್ಮ ಮನೆಯವರು 15 ವರ್ಷಗಳಿಂದ ನಡೆಸುತ್ತಿದ್ದ ಹೋಟೆಲ್‌ ಸೇರಿದಂತೆ ಇಲ್ಲಿದ್ದ ಕೆಲವು ಅಂಗಡಿಗಳನ್ನೆಲ್ಲ ಮೆಟ್ರೊ ಕಾಮಗಾರಿಗಾಗಿ ತೆರವುಗೊಳಿಸಿದರು. ಕಾಮಗಾರಿ ನಡೆಯುತ್ತಲೇ ಇದೆ. ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ. ದೂಳು ತುಂಬಿ ಹೋಗಿದೆ. ‍ಪಕ್ಕದಲ್ಲಿರುವ ಯಾವುದೇ ಅಂಗಡಿ ಹೋಟೆಲ್‌ಗಳಲ್ಲಿ ವ್ಯಾಪಾರವೇ ಇಲ್ಲದಂತಾಗಿದೆ.
ಶಕುಂತಲಾ ನಾಗವಾರ
ಪ್ರತಿ ತಿಂಗಳು ನಾಲ್ಕೈದು ಲಕ್ಷ ರೂಪಾಯಿ ನಷ್ಟ ಮಾಡಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ನಾವು ಯಾರನ್ನೂ ದೂರಲು ಹೋಗುವುದಿಲ್ಲ. ಕಾಮಗಾರಿಗಳು ನಡೆಯುತ್ತಿರುವಾಗ ಸಮಸ್ಯೆ ಆಗಿಯೇ ಆಗುತ್ತದೆ. ಆದಷ್ಟು ಬೇಗ ಮೆಟ್ರೊ ಕಾಮಗಾರಿ ಪೂರ್ಣಗೊಳಿಸಿದರೆ ಸಮಸ್ಯೆ ಪರಿಹಾರಗೊಳ್ಳಲಿದೆ.
ಬಸವರಾಜ್‌ ಹೋಟೆಲ್‌ ಮಾಲೀಕರು ವೀರಣ್ಣ ಪಾಳ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.