ADVERTISEMENT

Namma Metro: ಶೀಘ್ರದಲ್ಲೇ ವಿವಿಧ ಆ್ಯಪ್‌ಗಳಲ್ಲಿ ಮೆಟ್ರೊ ಟಿಕೆಟ್‌

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 15:58 IST
Last Updated 29 ಜೂನ್ 2025, 15:58 IST
ನಮ್ಮ ಮೆಟ್ರೊ
ನಮ್ಮ ಮೆಟ್ರೊ   

ಬೆಂಗಳೂರು: ನಮ್ಮ ಮೆಟ್ರೊ ಪ್ರಯಾಣಿಕರಿಗೆ ಯಾವುದೇ ಆ್ಯಪ್‌ನಲ್ಲಿ ಟಿಕೆಟ್‌ ಖರೀದಿಸಲು ಅನುಕೂಲವಾಗುವಂತೆ ಮಾಡಲು ಓಪನ್ ನೆಟ್‌ವರ್ಕ್ ಫಾರ್ ಡಿಜಿಟಲ್ ಕಾಮರ್ಸ್‌ನೊಂದಿಗೆ (ಒಎನ್‌ಡಿಸಿ) ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್‌) ಸಂಯೋಜನೆ ನಡೆಸಲಿದೆ.

ಪ್ರಸ್ತುತ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಪಾವತಿ ಮಾಡಿ ಟಿಕೆಟ್‌ ಖರೀದಿಸಲು, ಸ್ಮಾರ್ಟ್‌ಕಾರ್ಡ್‌ ಮೂಲಕ ಸಂಚರಿಸಲು, ವಾಟ್ಸ್​ಆ್ಯಪ್​ ಚಾಟ್‌ಬಾಟ್ ಹಾಗೂ ಪೇಟಿಎಂನಲ್ಲಿ ಟಿಕೆಟ್ ಖರೀದಿ ಮಾಡಲು ಅವಕಾಶವಿದೆ. ಒಎನ್‌ಡಿಸಿ ಜೊತೆಗೆ ಸಂಯೋಜನೆಯ ಬಳಿಕ ಟುಮ್ಯಾಕೊ, ರೆಡ್‌ಬಸ್, ಔಟ್ ಪಾಥ್, ಹೈವೇ ಡಿಲೈಟ್, ನಮ್ಮ ಯಾತ್ರಿ, ರ‍್ಯಾ‍ಪಿಡೊ ಸೇರಿದಂತೆ ಹತ್ತಕ್ಕೂ ಅಧಿಕ ಅಪ್ಲಿಕೇಶನ್‌ಗಳಲ್ಲಿ ಟಿಕೆಟ್‌ ಖರೀದಿಸಲು ಅವಕಾಶವಾಗಲಿದೆ.

ಈ ಯೋಜನೆಯು ಸಾರ್ವಜನಿಕ ಸಾರಿಗೆಗಳನ್ನು ಸಂಯೋಜಿಸುವ, ಪ್ರಯಾಣ ಸಂಪರ್ಕಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿದೆ. ಪ್ರಯಾಣಿಕರು ಏಕೀಕೃತ ಡಿಜಿಟಲ್ ಪ್ಲಾಟ್‌ಫಾರ್ಮ್ ಮೂಲಕ ಮೆಟ್ರೊ ಟಿಕೆಟ್‌ಗಳನ್ನು ಖರೀದಿಸಲು, ಸ್ಮಾರ್ಟ್‌ಕಾರ್ಡ್‌ಗಳನ್ನು ರೀಚಾರ್ಜ್ ಮಾಡಲು, ಬಸ್ ಪಾಸ್‌ಗಳನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಬಿಎಂಆ‌ರ್‌ಸಿಎಲ್‌ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ADVERTISEMENT

ರ‍್ಯಾಪಿಡೊ, ನಮ್ಮ ಯಾತ್ರಿ ಆ್ಯಪ್‌ಗಳಲ್ಲಿ ಮೆಟ್ರೊ ಟಿಕೆಟ್‌ ಪರೀಕ್ಷೆ ನಡೆಸಲಾಗುತ್ತಿದೆ. ಬಹು ಆ್ಯಪ್‌ಗಳಲ್ಲಿ ಟಿಕೆಟ್‌ ಖರೀದಿಸುವುದರ ಸಾಧಕ– ಬಾಧಕಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ. ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ವಿವರ ನೀಡಿದ್ದಾರೆ.

ಇತ್ತೀಚೆಗೆ ಬೈಯಪ್ಪನಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಸ್ವಯಂ ಟಿಕೆಟ್ ನೀಡುವ ಯಂತ್ರಗಳನ್ನು ಅಳವಡಿಸಲಾಗಿದೆ. ಇವು 30 ಸೆಕೆಂಡುಗಳಲ್ಲಿ ಟಿಕೆಟ್​ಗಳನ್ನು ಒದಗಿಸುತ್ತಿರುವುದರಿಂದ ಪ್ರಯಾಣಿಕರ ದಟ್ಟಣೆ ವೇಳೆಯಲ್ಲಿ ಟಿಕೆಟ್‌ಗೆ ಉಂಟಾಗುವ ನೂಕುನುಗ್ಗಲು ತಪ್ಪಿದೆ ಎಂದು ಹೇಳಿದ್ದಾರೆ.

ನಿಧಾನಗತಿಯಲ್ಲಿ ಸಾಗಿದ ಮೆಟ್ರೊ
ನಮ್ಮ ಮೆಟ್ರೊ ಹಸಿರು ಮಾರ್ಗದಲ್ಲಿ ಕೆ.ಆರ್‌. ಮಾರುಕಟ್ಟೆ–ನ್ಯಾಷನಲ್‌ ಕಾಲೇಜು ನಿಲ್ದಾಣಗಳ ನಡುವೆ ನಾಲ್ಕೈದು ದಿನಗಳಿಂದ ಮೆಟ್ರೊ ವಿಪರೀತ ನಿಧಾನವಾಗಿ ಸಾಗುತ್ತಿದೆ. ಹಳಿ ನಿರ್ವಹಣೆ ನಡೆಯುತ್ತಿದ್ದರಿಂದ ಹೀಗಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ. ಕೆ.ಆರ್‌. ಮಾರುಕಟ್ಟೆ ಮೆಟ್ರೊ ನಿಲ್ದಾಣದಿಂದ ನ್ಯಾಷನಲ್‌ ಕಾಲೇಜು ಮೆಟ್ರೊ ನಿಲ್ದಾಣಕ್ಕೆ ನಡೆದುಕೊಂಡು ಹೋದರೂ ಇದಕ್ಕಿಂತ ವೇಗವಾಗಿ ತಲುಪಬಹುದು. ಬೆಳಿಗ್ಗೆ ಕೆಲಸಕ್ಕೆ ತೆರಳುವವರಿಗೆ ಬಹಳ ತೊಂದರೆಯಾಗಿದೆ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಹಳಿ ನಿರ್ವಹಣೆ ಕೆಲಸ ಭಾನುವಾರ ಮುಗಿದಿದೆ. ಸೋಮವಾರದಿಂದ ಯಾವುದೇ ತಡೆಯಿಲ್ಲದೇ ಮೆಟ್ರೊ ಸಂಚರಿಸಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.