ADVERTISEMENT

Bengaluru Metro | ವೈಟ್‌ಫೀಲ್ಡ್ ಮೆಟ್ರೊ: ಲೋಕಾರ್ಪಣೆಗೆ ದಿನಗಣನೆ

ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2023, 20:57 IST
Last Updated 1 ಮಾರ್ಚ್ 2023, 20:57 IST
ವೈಟ್‌ಫೀಲ್ಡ್‌ ಮೆಟ್ರೊ ರೈಲು ಮಾರ್ಗ
ವೈಟ್‌ಫೀಲ್ಡ್‌ ಮೆಟ್ರೊ ರೈಲು ಮಾರ್ಗ   

ಬೆಂಗಳೂರು: ಬಹುನಿರೀಕ್ಷಿತ ಕೆ.ಆರ್‌.ಪುರ– ವೈಟ್‌ಫೀಲ್ಡ್ ಮೆಟ್ರೊ ರೈಲು ಮಾರ್ಗಕ್ಕೆ ಮೆಟ್ರೊ ರೈಲು ಸುರಕ್ಷತಾ ಆಯುಕ್ತರಿಂದ(ಸಿಆರ್‌ಎಸ್‌) ಹಸಿರು ನಿಶಾನೆ ದೊರೆತಿದ್ದು, ಮುಂದಿನ ವಾರ ರಾಜ್ಯಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಯಾಗುವ ಸಾಧ್ಯತೆ ಇದೆ.

ಕಳೆದ ವಾರ ಸುರಕ್ಷತೆ ಪರಿಶೀಲಿಸಿದ್ದ ಸಿಆರ್‌ಎಸ್‌ ತಂಡ, ಫೆ.28ರಂದು ಪ್ರಮಾಣ ಪತ್ರ ನೀಡಿದೆ. ವಾಣಿಜ್ಯ ಸಂಚಾರಕ್ಕೆ ಈ ಮಾರ್ಗ ಸುರಕ್ಷಿತವಾಗಿರುವ ಬಗ್ಗೆ ಹಸಿರು ನಿಶಾನೆ ದೊರೆತ ಬೆನ್ನಲ್ಲೇ ಲೋಕಾರ್ಪಣೆಗೆ ಬಿಎಂಆರ್‌ಸಿಎಲ್ ಸಿದ್ಧತೆ ನಡೆಸುತ್ತಿದೆ.

ಮೆಟ್ರೊ ರೈಲು ನಿಲ್ದಾಣಗಳಲ್ಲಿ ಇರುವ ಸಣ್ಣಪುಟ್ಟ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಬೇಕಿದೆ. ಮಾರ್ಚ್‌ 15ರ ಕಾಲಮಿತಿಯಲ್ಲಿ ಎಲ್ಲವೂ ಪೂರ್ಣಗೊಳ್ಳಲಿದೆ. ಅದಕ್ಕೂ ಮುನ್ನವೇ ಮೆಟ್ರೊ ರೈಲು ವಾಣಿಜ್ಯ ಸಂಚಾರ ಆರಂಭವಾಗಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಹೇಳುತ್ತಾರೆ.

ADVERTISEMENT

ಮಾರ್ಚ್‌ 11ರಂದು ರಾಜ್ಯಕ್ಕೆ ಪ್ರಧಾನಿ ಭೇಟಿ ನೀಡಲಿದ್ದು, ಬೆಂಗಳೂರು–ಮೈಸೂರು ಹೆದ್ದಾರೆ ಲೋಕಾರ್ಪಣೆ ಮಾಡಲಿದ್ದಾರೆ. ಅವರಿಂದಲೇ ವೈಟ್‌ಫೀಲ್ಡ್‌ ವಿಸ್ತರಿತ ಮೆಟ್ರೊ ಮಾರ್ಗ ಉದ್ಘಾಟನೆ ಮಾಡಿಸಲು ಯೋಚಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳು ತಿಳಿಸಿವೆ.

ವೈಟ್‌ಫೀಲ್ಡ್‌ ತನಕ ರೈಲುಗಳ ಸಂಚಾರ ಆರಂಭವಾದರೆ ಐ.ಟಿ ಕಾರಿಡಾರ್‌ಗೆ ನಗರದ ವಿವಿಧೆಡೆಯಿಂದ ಸಂಪರ್ಕ ಕಲ್ಪಿಸಿದಂತೆ ಆಗಲಿದೆ. ಮೆಟ್ರೊ ರೈಲು ಪ್ರಯಾಣಿಕರ ಸಂಖ್ಯೆಯೂ ದುಪ್ಪಟ್ಟಾಗುವ ಸಾಧ್ಯತೆ ಇದೆ.

15.5 ಕಿಲೋ ಮೀಟರ್‌‌ ಉದ್ದದ ಬೈಯಪ್ಪನಹಳ್ಳಿ–ಕೆ.ಆರ್. ಪುರಂ- ವೈಟ್‌ಫೀಲ್ಡ್‌ ಮಾರ್ಗದಲ್ಲಿ ಕೆ.ಆರ್.ಪುರ–ವೈಟ್‌ಫೀಲ್ಡ್‌ ನಡುವಿನ 13.71 ಕಿಲೋ ಮೀಟರ್ ಮಾರ್ಗ ಉದ್ಘಾಟನೆಗೆ ಸಿದ್ಧವಾಗಿದೆ. ಬೈಯಪ್ಪನಹಳ್ಳಿ–ಕೆ.ಆರ್‌.ಪುರ ನಡುವಿನ ಮಾರ್ಗ ಜೂನ್‌ ಅಂತ್ಯ ಅಥವಾ ಜುಲೈನಲ್ಲಿ ಲೋಕಾರ್ಪಣೆಯಾಗಲಿದೆ. ಆ ತನಕ ಈ ಎರಡು ನಿಲ್ದಾಣಗಳ ನಡುವೆ ಬಿಎಂಟಿಸಿ ಬಸ್‌ಗಳನ್ನು ಫೀಡರ್ ಸೇವೆಗೆ ಬಳಸಿಕೊಳ್ಳಲು ಬಿಎಂಆರ್‌ಸಿಎಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.