ಬೆಂಗಳೂರು: ‘ಹೆಬ್ಬಾಳ ಬಳಿ ಬಹು ಮಾದರಿ ಸಾರಿಗೆ ಕೇಂದ್ರದ ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳದೆ, 45 ಎಕರೆ ಜಮೀನನ್ನು ಬಿಎಂಆರ್‌ಸಿಎಲ್‌ಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಬೇಕು’ ಎಂದು ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ‘ಬಹು ಮಾದರಿ ಸಾರಿಗೆ ಕೇಂದ್ರದ ವಿನ್ಯಾಸದಲ್ಲಿ ರಾಜಿ ಮಾಡಿಕೊಳ್ಳುವಂತೆ ಬೆಂಗಳೂರು ಮೆಟ್ರೊ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮೇಲೆ ಸ್ಥಾಪಿತ ಹಿತಾಸಕ್ತಿಗಳು ಭಾರಿ ಒತ್ತಡ ಹೇರುತ್ತಿವೆ. ಒತ್ತಡಕ್ಕೆ ಒಳಗಾದ ಬಿಎಂಆರ್‌ಸಿಎಲ್ ಈಗ ಯೋಜನೆಗೆ ತನ್ನ ಭೂಮಿಯ ಬೇಡಿಕೆಯನ್ನು 45 ಎಕರೆಗಳಿಂದ 9 ಎಕರೆಗಳಿಗೆ ಇಳಿಸಿದೆ. ಇದನ್ನು ಸರಿಹೊಂದಿಸಲು ಡಿಪೊ, ಪಾರ್ಕಿಂಗ್ ಸ್ಥಳ ಮತ್ತು ವಿಮಾನ ನಿಲ್ದಾಣ ಮೆಟ್ರೊ ಮಾರ್ಗವನ್ನು ಸಂಪರ್ಕಿಸುವ ಟ್ರೈ-ಜಂಕ್ಷನ್ ಅನ್ನು ಒಳಗೊಂಡಿರುವ ಮೆಗಾ ಹಬ್ ಸೇರಿದಂತೆ ನಾಗರಿಕಸ್ನೇಹಿ ಸೌಲಭ್ಯಗಳನ್ನು ಕೈಬಿಟ್ಟಿದೆ. ರಾಜಕೀಯ ಮತ್ತು ರಿಯಲ್ ಎಸ್ಟೇಟ್ ಲಾಬಿಗಳಿಂದ ಅಸಹನೀಯ ಒತ್ತಡಕ್ಕೆ ಮಣಿದು, ರಾಜಿ ಮಾಡಿಕೊಳ್ಳುತ್ತಿದೆ’ ಎಂದು ಹೇಳಿದ್ದಾರೆ.
‘2024ರ ಮಾರ್ಚ್‌ನಿಂದ 45 ಎಕರೆ ಭೂಮಿಗಾಗಿ ಬಿಎಂಆರ್‌ಸಿಎಲ್ ಮನವಿಯನ್ನು ಪರಿಶೀಲಿಸಲಾಗುತ್ತಿದೆ. ಈ ವಿಳಂಬವು ವಿಮಾನ ನಿಲ್ದಾಣ ಸಂಪರ್ಕಿಸುವ ಮೆಟ್ರೊದ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಸ್ವಾಧೀನದಲ್ಲಿರುವ 45 ಎಕರೆ ಭೂಮಿಗೆ ಸಂಬಂಧಿಸಿದಂತೆ, ಭೂಮಾಲೀಕರಿಗೆ ಪಾವತಿಸಲು ಕೆಐಎಡಿಬಿ ನಿಗದಿಪಡಿಸಿದ ಬೆಲೆಯನ್ನು ಪಾವತಿಸಲು ಬಿಎಂಆರ್‌ಸಿಎಲ್ ಸಿದ್ಧವಾಗಿದೆ. ಖಾಸಗಿ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿಗೆ ಆದ್ಯತೆ ನೀಡಿ, ಈ ನಿರ್ಣಾಯಕ ಸ್ಥಳದಲ್ಲಿ ಮೆಟ್ರೊ ಯೋಜನೆಯ ಕೆಲಸವನ್ನು ವೇಗಗೊಳಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.