ADVERTISEMENT

ಮೆಟ್ರೊ ಪಾರ್ಕಿಂಗ್ ನಿಮಿಷಗಳ ಸಮಸ್ಯೆ: ರಾತ್ರಿ 12ಗಂಟೆ ದಾಟಿದರೆ ದುಪ್ಪಟ್ಟು ಶುಲ್ಕ

ಬಾಲಕೃಷ್ಣ ಪಿ.ಎಚ್‌
Published 8 ನವೆಂಬರ್ 2025, 19:27 IST
Last Updated 8 ನವೆಂಬರ್ 2025, 19:27 IST
ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣದ ಪಾರ್ಕಿಂಗ್‌ ಸ್ಥಳ (ಸಾಂದರ್ಭಿಕ ಚಿತ್ರ)
ಚಿಕ್ಕಬಿದರಕಲ್ಲು ಮೆಟ್ರೊ ನಿಲ್ದಾಣದ ಪಾರ್ಕಿಂಗ್‌ ಸ್ಥಳ (ಸಾಂದರ್ಭಿಕ ಚಿತ್ರ)   

ಬೆಂಗಳೂರು: ಮೆಟ್ರೊ ಪಾರ್ಕಿಂಗ್‌ಗೆ ಸಂಬಂಧ‍ಪಟ್ಟಂತೆ ನಿಗದಿಪಡಿಸಿರುವ ಸಮಯವು ಸಮಸ್ಯೆಯನ್ನು ಉಂಟು ಮಾಡಿದೆ. ರಾತ್ರಿ 12ಕ್ಕೆ ದಿನದ ಪಾರ್ಕಿಂಗ್‌ ಸಮಯ ಮುಕ್ತಾಯಗೊಳ್ಳುತ್ತಿದೆ. ಮೆಟ್ರೊ ಒಂದು ನಿಮಿಷ ತಡವಾಗಿ ಬಂದರೂ ಪ್ರಯಾಣಿಕರು ಹೆಚ್ಚುವರಿಯಾಗಿ ಹಣ ಪಾವತಿಸಬೇಕಾಗಿದೆ. ಕೆಲವು ನಿಲ್ದಾಣಗಳಲ್ಲಿ ಪಾರ್ಕಿಂಗ್ ಸ್ಥಳಕ್ಕೆ ಬೀಗ ಹಾಕಲಾಗುತ್ತಿದೆ.

‘ಯಲಚೇನಹಳ್ಳಿ ನಿಲ್ದಾಣಕ್ಕೆ ಕೊನೇ ರೈಲು ತಲುಪುವಾಗ ರಾತ್ರಿ 12 ಗಂಟೆ ದಾಟಿರುತ್ತದೆ. ನಾನು ಇತ್ತೀಚೆಗೆ 12 ಗಂಟೆ 2 ನಿಮಿಷಕ್ಕೆ ತಲುಪಿದೆ. ರೈಲು ನಿಲ್ದಾಣದಿಂದ ಪಾರ್ಕಿಂಗ್‌ ಸ್ಥಳಕ್ಕೆ ಹೋಗಲು ಮತ್ತೆರಡು ನಿಮಿಷ ಬೇಕಾಯಿತು. ನಾಲ್ಕು ನಿಮಿಷಕ್ಕೆ ಹೆಚ್ಚುವರಿಯಾಗಿ ₹ 15 ನೀಡಬೇಕು ಎಂದು ಕೇಳಿದರು. ನಾನೇನು ತಡವಾಗಿ ಹೋಗಿದ್ದಲ್ಲ. ಕೊನೇ ರೈಲು ಮೆಜೆಸ್ಟಿಕ್‌ನಲ್ಲಿ 15 ನಿಮಿಷ ನಿಲ್ಲಿಸಿ, ಆ ನಂತರ ಹೊರಟಿತು. ಇದರಿಂದ ತಡವಾಗಿತ್ತು. ನಾಲ್ಕೂ ಕಡೆಯಿಂದ ಬರುವ ಯಾರಿಗೂ ಕೊನೇ ಮೆಟ್ರೊ ರೈಲು ತಪ್ಪದಿರಲಿ ಎಂದು ಸ್ವಲ್ಪ ನಿಲ್ಲಿಸುವುದು ಒಳ್ಳೆಯದೇ. ಆದರೆ, ಇದು ಪಾರ್ಕಿಂಗ್‌ ಸ್ಥಳಗಳಲ್ಲಿ ಸಮಸ್ಯೆ ಉಂಟು ಮಾಡುತ್ತಿದೆ’ ಎಂದು ಪ್ರಯಾಣಿಕ ಚಂದ್ರಪ್ರಕಾಶ್‌ ತಿಳಿಸಿದರು.

ಇದೇ ಹಸಿರು ಮಾರ್ಗದಲ್ಲಿ ಇನ್ನೊಂದು ದಿಕ್ಕಿಗೆ ಇರುವ ನಾಗಸಂದ್ರ ನಿಲ್ದಾಣದಲ್ಲಿಯೂ ಇಂಥದ್ದೇ ಸಮಸ್ಯೆ ಇರುವುದರನ್ನು ಪ್ರಯಾಣಕರೊಬ್ಬರು ಬಿಚ್ಚಿಟ್ಟಿದ್ದಾರೆ.

ADVERTISEMENT

‘ನಾಗಸಂದ್ರಕ್ಕೆ ರಾತ್ರಿ 12.10ಕ್ಕೆ ಕೊನೆಯ ರೈಲು ತಲುಪುತ್ತದೆ. ಒಂದು ಬಾರಿ ನಾನು ಹೋಗುವಾಗ 12 ಗಂಟೆಗೆ ಬೀಗ ಹಾಕಿ ಹೋಗಿದ್ದರು. ನನ್ನ ಬೈಕ್‌ ಒಳಗೆಯೇ ಇತ್ತು. ಅದನ್ನು ಹೊರತುಪಡಿಸಿದರೆ ಉಳಿದ ಸಂದರ್ಭಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ನೋಡಿಕೊಳ್ಳುವವರಿದ್ದರೂ ಎರಡುಪಟ್ಟು ಪಾವತಿ ಮಾಡುವಂತೆ ಸೂಚಿಸಿದ್ದರು. ಇಡೀ ದಿನಕ್ಕೆ ಬೈಕ್‌ಗೆ ₹ 30 ಪಾವತಿಸಬೇಕು. 10 ನಿಮಿಷಕ್ಕೆ ಮತ್ತೆ ₹ 30 ನೀಡಬೇಕು ಎಂಬುದು ಸರಿಯಲ್ಲ. ನಾಗಸಂದ್ರದ ನಂತರವೂ ಮೂರು ನಿಲ್ದಾಣಗಳಿವೆ. ಅಲ್ಲಿ ಇನ್ನೂ ತಡವಾಗುತ್ತದೆ’ ಎಂದು ತಿಳಿಸಿದ್ದಾರೆ.

ರಾತ್ರಿ 12ರವರೆಗೆ ಪಾರ್ಕಿಂಗ್‌ ಎಂದು ಬೋರ್ಡ್‌ ಹಾಕಿರುತ್ತಾರೆ. ಭಾನುವಾರ ಕೊನೇ ರೈಲಿಗಿಂತ ಮೊದಲಿನ ರೈಲು ಇರುವುದಿಲ್ಲ. ಹಾಗಾಗಿ ಮೆಜೆಸ್ಟಿಕ್‌ನಲ್ಲೇ 20 ನಿಮಿಷಕ್ಕೂ ಅಧಿಕ ಸಮಯ ಕಾದಿರುತ್ತೇವೆ. ಕೊನೇ ರೈಲಿನಲ್ಲಿ ಬರುವವರನ್ನು ಸುಲಿಗೆ ಮಾಡಲೆಂದೇ ಮಾಡಿದ ಕಿತಾಪತಿಯಂತೆ ಕಾಣುತ್ತಿದೆ. ಮೆಟ್ರೊದಿಂದ ಇಳಿದು ಹೋಗುವ ಸಮಯವನ್ನೂ ಸೇರಿಸಿ ಪಾರ್ಕಿಂಗ್‌ ಅವಧಿಯನ್ನು ಕೊನೇ ಮೆಟ್ರೊ ತಲುಪಿದ ಐದು ನಿಮಿಷವರೆಗೆ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.

‘ಕೋಣನಕುಂಟೆ, ಚಿಕ್ಕಬಿದರಕಲ್ಲು ಮುಂತಾದ ನಿಲ್ದಾಣಗಳಲ್ಲಿ ಇಂಟರ್‌ಲಾಕ್‌ ಹಾಕಿ ಪಾರ್ಕಿಂಗ್‌ ಸ್ಥಳವನ್ನು ಚೆನ್ನಾಗಿ ಇಟ್ಟುಕೊಂಡಿದ್ದಾರೆ. ಆದರೆ, ಯಲಚೇನಹಳ್ಳಿಯಂಥ ನಿಲ್ದಾಣಗಳಲ್ಲಿ ಬೇಸಿಗೆಯಲ್ಲಿ ದೂಳು ಹಾರುತ್ತಿರುತ್ತದೆ. ಮಳೆಗಾಲದಲ್ಲಿ ಕೆಸರು ತುಂಬಿರುತ್ತದೆ. ಅದರಲ್ಲಿಯೇ ವಾಹನಗಳನ್ನು ನಿಲ್ಲಿಸಿ ಬರಬೇಕಿದೆ. ಶುಲ್ಕ ಪಾವತಿಸಿ ನಾವು ವಾಹನಗಳನ್ನು ನಿಲ್ಲಿಸುವುದರಿಂದ ಉತ್ತಮ ಸೌಲಭ್ಯವನ್ನು ಬಿಎಂಆರ್‌ಸಿಎಲ್‌ ಕಲ್ಪಿಸಬೇಕು’ ಎಂದು ಆಗ್ರಹಿಸಿದ್ದಾರೆ.

17 ನಿಲ್ದಾಣಗಳಲ್ಲಿಲ್ಲ ಪಾರ್ಕಿಂಗ್‌: ನಮ್ಮ ಮೆಟ್ರೊ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಒಟ್ಟು 83 ನಿಲ್ದಾಣಗಳಿವೆ. ಅದರಲ್ಲಿ 66 ನಿಲ್ದಾಣಗಳಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಇದೆ. ಉಳಿದ 17ರಲ್ಲಿ ಪಾರ್ಕಿಂಗ್‌ಗೆ ಜಾಗವೇ ಇಲ್ಲ. ಇಂಟರ್‌ಚೇಂಜ್‌ ನಿಲ್ದಾಣವಾದ ಆರ್‌.ವಿ. ರಸ್ತೆಯಲ್ಲಿಯೇ ಪಾರ್ಕಿಂಗ್‌ ಇಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ.

ಕೆಲವೇ ವಾಹನಗಳಿಗೆ ವ್ಯವಸ್ಥೆ

ನಮ್ಮ ಮೆಟ್ರೊದಲ್ಲಿ ಸರಾಸರಿ 9.5 ಲಕ್ಷ ಜನರು ನಿತ್ಯ ಸಂಚರಿಸುತ್ತಿದ್ದಾರೆ. ರಜಾದಿನಗಳಲ್ಲಿ ಕಡಿಮೆ ಇದ್ದರೆ ಕೆಲವು ದಿನಗಳಲ್ಲಿ 10 ಲಕ್ಷ ದಾಟಿರುತ್ತದೆ. ಆದರೆ ಕೆಲವೇ ವಾಹನಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇದೆ. ಒಟ್ಟು 12700 ದ್ವಿಚಕ್ರವಾಹನಗಳು ಹಾಗೂ 2300 ಇತರ ವಾಹನಗಳು ಪಾರ್ಕಿಂಗ್‌ ಮಾಡಲಷ್ಟೇ ನಮ್ಮ ಮೆಟ್ರೊ ನಿಲ್ದಾಣಗಳಲ್ಲಿ ಅವಕಾಶವಿದೆ.

ಗುತ್ತಿಗೆದಾರರಿಗೆ ಸೂಚನೆ

ಕೊನೇ ಮೆಟ್ರೊ ರೈಲು ಬರುವವರೆಗೆ ಪಾರ್ಕಿಂಗ್‌ ತೆರೆದಿರಬೇಕು. ಹೆಚ್ಚುವರಿಯಾಗಿ ಶುಲ್ಕ ವಸೂಲಿ ಮಾಡಬಾರದು ಎಂದು ಗುತ್ತಿಗೆದಾರರಿಗೆ ಸೂಚಿಸುವುದಾಗಿ ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.