
ಬೆಂಗಳೂರು: ‘ನಮ್ಮ ಮೆಟ್ರೊ’ದಲ್ಲಿ ನಿಲ್ದಾಣ ನಿಯಂತ್ರಕರ ಕೊರತೆ ಉಂಟಾಗಿದೆ. ಇದರಿಂದ ಹಲವು ಮೆಟ್ರೊ ನಿಲ್ದಾಣಗಳಲ್ಲಿ ರಾತ್ರಿ 10 ಗಂಟೆ ಬಳಿಕ ನಿಲ್ದಾಣ ನಿಯಂತ್ರಕರು ಇಲ್ಲದಂತಾಗಿದೆ.
ಹಸಿರು ಮಾರ್ಗದ ದಾಸರಹಳ್ಳಿ ನಿಲ್ದಾಣದಲ್ಲಿ ಒಂದು ತಿಂಗಳ ಹಿಂದೆ ರಾತ್ರಿ ಪ್ರಯಾಣಿಕರೊಬ್ಬರು ಲಿಫ್ಟ್‌ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಕೂಡಲೇ ಅವರನ್ನು ಹೊರತರಲು ನಿಲ್ದಾಣ ನಿಯಂತ್ರಕರು ಇರಲಿಲ್ಲ. ಜಾಲಹಳ್ಳಿಯಿಂದ ನಿಯಂತ್ರಕರು ಬಂದು ಪ್ರಯಾಣಿಕರನ್ನು ರಕ್ಷಿಸಿದ್ದರು.
‘ಮೆಟ್ರೊ ರೈಲು ಸಂಚರಿಸುವ ಸಮಯದಲ್ಲಿ ಪ್ರತಿ ನಿಲ್ದಾಣದಲ್ಲಿ ನಿಲ್ದಾಣ ನಿಯಂತ್ರಕರು (ಸ್ಟೇಷನ್ ಕಂಟ್ರೋಲರ್) ಇರಬೇಕು ಎಂಬ ನಿಯಮವಿದೆ. ಆದರೆ, ರಾತ್ರಿ ಪಾಳಿಯಲ್ಲಿ ಇರುವುದಿಲ್ಲ. ಮೆಟ್ರೊ ಹಸಿರು ಮಾರ್ಗದಲ್ಲಿ 32 ಹಾಗೂ ನೇರಳೆ ಮಾರ್ಗದಲ್ಲಿ 37 ನಿಲ್ದಾಣಗಳಿವೆ. ಅಕ್ಟೋಬರ್ 2ರಂದು ಹಸಿರು ಮಾರ್ಗದ 9 ನಿಲ್ದಾಣಗಳಲ್ಲಿ ಹಾಗೂ ನೇರಳೆ ಮಾರ್ಗದ 7 ನಿಲ್ದಾಣಗಳಲ್ಲಿ ಮಾತ್ರ ನಿಯಂತ್ರಕರು ಕಾರ್ಯನಿರ್ವಹಿಸಿದ್ದಾರೆ. ಡಾ.ಬಿ.ಆರ್. ಅಂಬೇಡ್ಕರ್ ನಿಲ್ದಾಣ ವಿಧಾನಸೌಧದಂಥ ನಿಲ್ದಾಣದಲ್ಲಿ ಕೂಡಾ ಸ್ಟೇಷನ್ ಕಂಟ್ರೋಲರ್ ಇರಲಿಲ್ಲ’ ಎಂದು ಮೆಟ್ರೊ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಭದ್ರತಾ ಸಿಬ್ಬಂದಿ ನೀಡುವ ಭದ್ರತೆ ಬೇರೆ, ನಿಲ್ದಾಣ ನಿಯಂತ್ರಕರು ನೀಡುವ ಸುರಕ್ಷತೆ ಬೇರೆ. ಸಿಗ್ನಲಿಂಗ್, ಟೆಲಿಕಾಂ, ವಿದ್ಯುತ್ ಸರಬರಾಜಿನಲ್ಲಿ ಸಮಸ್ಯೆ ಉಂಟಾದರೆ, ಶಾರ್ಟ್ ಸರ್ಕೀಟ್ ಆದರೆ ಸರಿಪಡಿಸಲು ಭದ್ರತಾ ಸಿಬ್ಬಂದಿಗೆ ಯಾವುದೇ ತರಬೇತಿ ಇರುವುದಿಲ್ಲ. ನಿಯಂತ್ರಕರು ಎಲ್ಲ ತಾಂತ್ರಿಕ ತರಬೇತಿ ಪಡೆದಿರುತ್ತಾರೆ. ರೈಲು ಅರ್ಧದಲ್ಲಿ ನಿಂತರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರತರುವುದೂ ಗೊತ್ತಿರುತ್ತದೆ. ಆದರೆ, ಪ್ರತಿದಿನ ಒಂದಲ್ಲ ಒಂದು ನಿಲ್ದಾಣದಲ್ಲಿ ರಾತ್ರಿ 10ರ ನಂತರ ಭದ್ರತಾ ಸಿಬ್ಬಂದಿಗೆ ನಿಲ್ದಾಣದ ಜವಾಬ್ದಾರಿ ವಹಿಸಲಾಗುತ್ತಿದೆ ಎಂದರು.
ನಿಲ್ದಾಣಗಳಲ್ಲಿ ತಾಂತ್ರಿಕ ನಿರ್ವಹಣೆ ಮಾತ್ರವಲ್ಲ, ಸಿಬ್ಬಂದಿ ನಿರ್ವಹಣೆಯನ್ನೂ ಮಾಡುವ ನಿಲ್ದಾಣ ನಿಯಂತ್ರಕ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಅಥವಾ ಅರ್ಹರಿಗೆ ಬಡ್ತಿ ನೀಡಿ ಭರ್ತಿ ಮಾಡಬೇಕು ಎಂದು ಸಿಬ್ಬಂದಿ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.