ADVERTISEMENT

ಮೆಟ್ರೊ ನಿಲ್ದಾಣದಲ್ಲಿ ಬಾಕ್ಸ್‌ ಪತ್ತೆ: ಆತಂಕ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 20:23 IST
Last Updated 6 ಆಗಸ್ಟ್ 2025, 20:23 IST
ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾದ ಟೂಲ್ ಕಿಟ್ ಬಾಕ್ಸ್
ಮೆಟ್ರೊ ನಿಲ್ದಾಣದಲ್ಲಿ ಪತ್ತೆಯಾದ ಟೂಲ್ ಕಿಟ್ ಬಾಕ್ಸ್   

ಬೆಂಗಳೂರು: ನಗರದ ಕೆ.ಆರ್.ಪುರಂ ಮೆಟ್ರೊ ನಿಲ್ದಾಣದಲ್ಲಿ ಬುಧವಾರ ಮಧ್ಯಾಹ್ನ ಅನುಮಾನಾಸ್ಪದ ಬಾಕ್ಸ್ ಪತ್ತೆಯಾಗಿದ್ದು, ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ಅದು ಎಚ್‌ಎಎಲ್ ಉದ್ಯೋಗಿಯೊಬ್ಬರು ಬಿಟ್ಟು ಹೋಗಿದ್ದ ಟೂಲ್ ಕಿಟ್ ಬಾಕ್ಸ್ ಎಂದು ಗೊತ್ತಾದ ಬಳಿಕ ಸಾರ್ವಜನಿಕರು ಮತ್ತು ಪೊಲೀಸರು ನಿಟ್ಟುಸಿರುಬಿಟ್ಟರು.

ಎಚ್‌ಎಎಲ್‌ನ ಏರ್‌ಕ್ರಾಫ್ಟ್ ವಿಭಾಗದ ಉದ್ಯೋಗಿ ಮಂಜುನಾಥ್ ಜಾಧವ್ ಅವರು ಹರಿಯಾಣದಲ್ಲಿ ತರಬೇತಿ ಮುಗಿಸಿ ನಗರಕ್ಕೆ ರೈಲಿನಲ್ಲಿ ಬಂದರು. ಬಳಿಕ ಅಲ್ಲಿಂದ ಮೆಟ್ರೊ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಅವರು ತಮ್ಮ ಟೂಲ್ ಕಿಟ್ ಬಾಕ್ಸ್ ಅನ್ನು ನಿಲ್ದಾಣದಲ್ಲಿಯೇ ಮರೆತು ಹೋಗಿದ್ದಾರೆ. ‌

ಬಾಕ್ಸ್ ಗಮನಿಸಿದ ಸಾರ್ವಜನಿಕರು, ಬಾಂಬ್ ಇರಬಹುದೆಂದು ಶಂಕೆ ವ್ಯಕ್ತಪಡಿಸಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಹದೇವಪುರ ಪೊಲೀಸರು ಭೇಟಿ ನೀಡಿ, ಸ್ಥಳವನ್ನು ಸುತ್ತುವರಿದರು.

ADVERTISEMENT

ಮುಂಜಾಗ್ರತಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ, ಆಂಬುಲೆನ್ಸ್ ಮತ್ತು ಅಗ್ನಿಶಾಮಕ ದಳವನ್ನು ಕರೆಸಿಕೊಳ್ಳಲಾಯಿತು. ಬಾಕ್ಸ್ ಪರಿಶೀಲಿಸಿದಾಗ ಸ್ಫೋಟಕ ವಸ್ತುಗಳು ಇರಲಿಲ್ಲ. ಬದಲಾಗಿ ಟೂಲ್ ಕಿಟ್ ಬಾಕ್ಸ್ ಎಂಬುದು ಗೊತ್ತಾಯಿತು.

ಮರೆತುಹೋಗಿದ್ದ ಟೂಲ್ ಕಿಟ್ ಬಾಕ್ಸ್ ಅನ್ನು ತೆಗೆದುಕೊಳ್ಳಲು ಮಂಜುನಾಥ್ ಅವರು ಮೆಟ್ರೊ ನಿಲ್ದಾಣಕ್ಕೆ ವಾಪಸ್ ಬಂದಿದ್ದಾರೆ. ಆಗ ಪೊಲೀಸರು ಅವರನ್ನು ವಿಚಾರಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ಬೇಜವಾಬ್ದಾರಿತನದಿಂದ ವರ್ತಿಸಬಾರದೆಂದು ಎಚ್ಚರಿಕೆ ನೀಡಿ, ಬಾಕ್ಸ್ ಕೊಟ್ಟು ಕಳುಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.