ADVERTISEMENT

ಲಾಲ್‌ಬಾಗ್‌ ಉದ್ಯಾನದ ಬೊನ್ಸಾಯ್ ಉದ್ಯಾನಕ್ಕೆ ಆಧುನಿಕ ಸ್ಪರ್ಶ

​ಪ್ರಜಾವಾಣಿ ವಾರ್ತೆ
Published 16 ಜನವರಿ 2025, 0:12 IST
Last Updated 16 ಜನವರಿ 2025, 0:12 IST
<div class="paragraphs"><p>ಲಾಲ್‌ಬಾಗ್‌ನಲ್ಲಿ ನಿರ್ಮಿಸುತ್ತಿರುವ ಬೊನ್ಸಾಯ್ ಉದ್ಯಾನ </p></div>

ಲಾಲ್‌ಬಾಗ್‌ನಲ್ಲಿ ನಿರ್ಮಿಸುತ್ತಿರುವ ಬೊನ್ಸಾಯ್ ಉದ್ಯಾನ

   

ಪ್ರಜಾವಾಣಿ ಚಿತ್ರ: ಕೃಷ್ಣಕುಮಾರ್ ಪಿ.ಎಸ್.

ಬೆಂಗಳೂರು: ಪ್ರಾಕೃತಿಕವಾಗಿ ಬೃಹತ್ ಗಾತ್ರದಲ್ಲಿ ಬೆಳೆಯುವ ಮರಗಳನ್ನು ಇಲ್ಲಿ ಕುಬ್ಜಗೊಳಿಸಿ, ಅವುಗಳನ್ನು ಕುಂಡಗಳಲ್ಲಿ ಬೆಳೆದು ಅದಕ್ಕೊಂದು ರೂಪ ನೀಡಲಾಗಿದೆ. ಎರಡೂ ಕೈಗಳಿಂದ ತಬ್ಬಿಕೊಳ್ಳಲಾರದಂತಹ  ಬೃಹದಾಕಾರವಾಗಿ ಬೆಳೆಯುವ ವಿವಿಧ ಜಾತಿಯ ಸಸ್ಯಗಳನ್ನು ಬೊನ್ಸಾಯ್‌ ಪದ್ಧತಿಯ ಮೂಲಕ ಕುಬ್ಜಗೊಳಿಸಿದ್ದು, ಮರಗಳನ್ನು ಕೈಗಳಲ್ಲಿ ಹಿಡಿದುಕೊಂಡು ಹೋಗಬಹುದು. ಹೊಸ ಆಕರ್ಷಣೆಯೊಂದಿಗೆ ಸಾರ್ವಜನಿಕರನ್ನು ಸ್ವಾಗತಿಸಲು ಬೊನ್ಸಾಯ್‌ ಉದ್ಯಾನ ಸಜ್ಜಾಗುತ್ತಿದೆ.

ADVERTISEMENT

ಇದು ಲಾಲ್‌ಬಾಗ್‌ನಲ್ಲಿರುವ  ಬೊನ್ಸಾಯ್‌ (ಕುಬ್ಜ ಪ್ರಭೇದದ ಸಸ್ಯ) ಉದ್ಯಾನದಲ್ಲಿ ಕಂಡು ಬರುವ ದೃಶ್ಯಗಳು.

ಲಾಲ್‌ಬಾಗ್‌ನ 2.5 ಎಕರೆ ಪ್ರದೇಶದಲ್ಲಿರುವ ಬೊನ್ಸಾಯ್‌ ಉದ್ಯಾನಕ್ಕೆ ಆಧುನಿಕ ಸ್ಪರ್ಶ ನೀಡುವ ಸಲುವಾಗಿ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಿದೆ. 10 ವರ್ಷದಿಂದ 80 ವರ್ಷದವರೆಗಿನ 100ಕ್ಕೂ ಹೆಚ್ಚು ಬೋನ್ಸಾಯ್‌ ಗಿಡಗಳನ್ನು ವಿವಿಧ ಹಂತಗಳಲ್ಲಿ ವಿನ್ಯಾಸಗೊಳಿಸಿ ಪ್ರದರ್ಶನಕ್ಕೆ ಇಡಲಾಗಿದೆ. ಬೊನ್ಸಾಯ್ ಕಲಾವಿದೆ ಅನುಪಮಾ ವೇದಾಚಲ ಅವರ ಮಾರ್ಗದರ್ಶನದಲ್ಲಿ ಈ ಉದ್ಯಾನದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ.

‘ದೆಹಲಿ, ಕೋಲ್ಕತ್ತಾ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಹಲವಾರು ಬೊನ್ಸಾಯ್‌ ಗಿಡಗಳನ್ನು ತರಿಸಲಾಗಿದೆ. ಸುಮಾರು ಮೂರು ವರ್ಷಗಳಿಂದ ಅವುಗಳ ಬೆಳವಣಿಗೆ, ಅವುಗಳಿಗೆ ಒಂದು ರೂಪ ನೀಡುವ ಕೆಲಸ ಪ್ರಗತಿಯಲ್ಲಿದೆ. ಬೆಂಗಳೂರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಒಂದು ಬೊನ್ಸಾಯ್‌ ಉದ್ಯಾನದ ನಿರ್ಮಿಸುವ ಉದ್ದೇಶದಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ. ಇದಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಅನುಪಮಾ ವೇದಾಚಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

80 ವರ್ಷದ ಬೊನ್ಸಾಯ್ ಗಿಡ

‘ಇಲ್ಲಿ ಗಿಡಗಳಿಗೆ ಸಂಬಂಧಿಸಿದ ಮಾಹಿತಿ ಒದಗಿಸುವ ಸ್ಟುಡಿಯೊವನ್ನು ನಿರ್ಮಿಸಲಾಗಿದೆ. ಸುಮಾರು 80ಕ್ಕೂ ಹೆಚ್ಚು ಪ್ರಭೇದದ ಬೊನ್ಸಾಯ್‌ ಸಸಿಗಳ ರಕ್ಷಣೆ ಮಾಡಿ, ಅವುಗಳನ್ನು ಪೋಷಿಸುವ ಕೆಲಸ ನಡೆಯುತ್ತಿದೆ. ನಗರ ಪ್ರದೇಶಗಳಲ್ಲಿ ಹಸಿರು ಪ್ರದೇಶ ಕಡಿಮೆಯಾಗುತ್ತಿದೆ. ದೊಡ್ಡ ಮರಗಳನ್ನು ಕುಬ್ಜಗೊಳಿಸಿ, ಅಪಾರ್ಟ್‌ಮೆಂಟ್‌ಗಳಲ್ಲಿ ಬೆಳೆಯಬಹುದು. ಪ್ರಕೃತಿದತ್ತವಾದ ಕಲ್ಲುಕೆತ್ತನೆಯೊಳಗೆ ಕುಬ್ಜ ಮರಗಳು ಬೆಳೆದಿರುವಂತೆ ಸೃಷ್ಟಿಸಲಾಗುತ್ತದೆ. ಒಂದು ಗಿಡವನ್ನು ಬೆಳೆಸಬೇಕಾದರೆ ಕನಿಷ್ಠ 3 ರಿಂದ 4 ವರ್ಷ ಸಮಯ ಬೇಕಾಗುತ್ತದೆ’ ಎಂದು ವಿವರಿಸಿದರು.

‘ಬೋನ್ಸಾಯ್‌ ಉದ್ಯಾನದ ಅಭಿವೃದ್ಧಿ ಕಾಮಗಾರಿಗಳು ಶೇಕಡ 40ರಷ್ಟು ಪೂರ್ಣಗೊಂಡಿವೆ. ಇನ್ನೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮೂರು ವರ್ಷಗಳಿಂದ ಈ ಉದ್ಯಾನ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿತ್ತು. ಜ. 16ರಿಂದ ಸಾರ್ವಜನಿಕರ ಪ್ರವೇಶಕ್ಕೆ ಈ ಉದ್ಯಾನ ಮುಕ್ತಗೊಳಿಸಲಾಗುವುದು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಂ. ಜಗದೀಶ್ ಮಾಹಿತಿ ನೀಡಿದರು.

₹ 55 ಲಕ್ಷ ವೆಚ್ಚದಲ್ಲಿ ಈ ಉದ್ಯಾನದ ಮರು ನಿರ್ಮಾಣದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಒಂದು ವರ್ಷದಲ್ಲಿ ಎಲ್ಲ ಕಾಮಗಾರಿ ಪೂರ್ಣಗೊಳ್ಳಲಿದೆ. ದೇಶದ ಪ್ರಥಮ ಬೊನ್ಸಾಯ್ ಉದ್ಯಾನದ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
ಎಂ. ಜಗದೀಶ್ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ

‘ಮರದ ಜಾತಿಯ ಎಲ್ಲ ಸಸ್ಯಗಳನ್ನು ಬೆಳೆಸಬಹುದು’

‘ಬೋನ್ಸಾಯ್‌ ಪದ್ಧತಿಯಲ್ಲಿ ಮರವಾಗಿ ಬೆಳೆಯುವ ಜಾತಿಯ ಎಲ್ಲ ಸಸ್ಯಗಳನ್ನೂ ಕುಬ್ಜವಾಗಿ ಬೆಳೆಸಬಹುದು. ಎತ್ತರಕ್ಕೆ ಬೆಳೆಯಲು ಬಿಡುವಂತಿಲ್ಲ. ಆಗಾಗ ಕತ್ತರಿಸುತ್ತಿರಬೇಕಾಗುತ್ತದೆ. ಆಲ ಫೈನ್‌ ಪೈಕಾಸ್‌ ಜಾತಿಯ ಮರಗಳು ಕ್ರಿಸ್‌ಮಸ್‌ ಟ್ರೀ ಮತ್ತು ಸಂಪಿಗೆ ನಿಂಬೆ ಮತ್ತಿತರ ಹಣ್ಣಿನ ಜಾತಿಯ ಗಿಡಗಳನ್ನು ಈ ಪದ್ಧತಿಯಲ್ಲಿ ಬೆಳೆಸಬಹುದು’ ಎಂದು ಅನುಪಮಾ ವೇದಾಚಲ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.