ಬೆಂಗಳೂರು: ಸಾಲದ ಹಣ ನೀಡುವ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರು ಯುವಕರಿಗೆ ಚಾಕುವಿನಿಂದ ಇರಿದಿರುವ ಘಟನೆ ನೆಲಮಂಗಲ ಪಟ್ಟಣದ ಜೆ.ಪಿ ಹಾಸ್ಟೆಲ್ ಮುಂಭಾಗದ ವಿನಾಯಕ ಜ್ಯೂಸ್ ಸೆಂಟರ್ನಲ್ಲಿ ನಡೆದಿದೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿರುವ ಚೇತನ್ ಮತ್ತು ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುದೀಪ್ ದೂರು ಆಧರಿಸಿ ನೆಲಮಂಗಲ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
‘ಹಲ್ಲೆಗೊಳಗಾದ ಸುದೀಪ್ ಎರಡು ವರ್ಷದ ಹಿಂದೆ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ₹2 ಸಾವಿರ ಹಣ ಕೊಟ್ಟಿದ್ದ. ಇತ್ತೀಚಿಗೆ ಆಕೆ ಅಂತರ ಕಾಯ್ದುಕೊಂಡಿದ್ದಳು. ಹಾಗಾಗಿ ಹಣವನ್ನು ನೀಡುವಂತೆ ಕೇಳಿದ್ದಾನೆ. ಆಕೆ ₹1 ಸಾವಿರ ಹಣವನ್ನು ಯುಪಿಐ ಮೂಲಕ ಕಳಿಸಿದ್ದಾಳೆ. ಉಳಿದ ಹಣವನ್ನು ನೀಡುವಂತೆ ಕರೆ ಮಾಡಿ ಕೇಳಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.
‘ಈ ವಿಚಾರವನ್ನು ಯುವತಿ ತನ್ನ ಸ್ನೇಹಿತರಿಗೆ ಹೇಳಿದ್ದಾಳೆ. ಜುಲೈ 9 ರಂದು ಸುದೀಪ್ ಕೆಲಸ ಮಾಡುತ್ತಿದ್ದ ಜ್ಯೂಸ್ ಅಂಗಡಿ ಬಳಿಗೆ ಬಂದ ನಾಲ್ವರ ತಂಡ, ಯುಪಿಐ ಮೂಲಕ ₹1 ಸಾವಿರ ಹಣ ಹಾಕಿದ್ದಾರೆ. ಕೆಲ ಹೊತ್ತಿನ ಬಳಿಕ ಜ್ಯೂಸ್ ಅಂಗಡಿ ಬಳಿಗೆ ಬಂದ ಅದೇ ಯುವಕರು ಗಲಾಟೆ ಆರಂಭಿಸಿದ್ದಾರೆ. ಆಗ ಜಗಳ ಬಿಡಿಸಲು ಬಂದ ಚೇತನ್ ಹಾಗೂ ಸುದೀಪ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ’ ಎಂದು ಹೇಳಿದ್ದಾರೆ.
‘ಕೊಟ್ಟಿದ್ದ ಹಣ ವಾಪಸ್ ಕೇಳಿದ್ದಕ್ಕೆ ಯುವತಿ ಕಡೆಯ ನಾಲ್ವರು ಯುವಕರು ಬಂದು ಹಣ ನೀಡಿ, ಗಲಾಟೆ ಮಾಡಿ ಹೋಗಿದ್ದರು. ಕೆಲ ಹೊತ್ತಿನ ಬಳಿಕ ಮತ್ತೆ ಬಂದು ಗಲಾಟೆ ಮಾಡುತ್ತಿದ್ದರು. ಅದನ್ನು ತಡೆಯಲು ಹೋದ ಇಬ್ಬರಿಗೂ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ’ ಎಂದು ಸುದೀಪ್ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.