ADVERTISEMENT

Metro: ಗೊರಗುಂಟೆಪಾಳ್ಯ, ಮೈಸೂರು ರಸ್ತೆಯಲ್ಲಿ ದೇಶದ ಅತಿ ಎತ್ತರದ ಮೆಟ್ರೊ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 16:18 IST
Last Updated 10 ಡಿಸೆಂಬರ್ 2025, 16:18 IST
   

ಬೆಂಗಳೂರು: ಭಾರತದ ಅತಿ ಎತ್ತರದ ಇಂಟರ್‌ಚೇಂಜ್‌ ನಿಲ್ದಾಣ ಎಂದು ಹೆಸರು ಪಡೆದಿರುವ ‘ನಮ್ಮ ಮೆಟ್ರೊ’ ಜಯದೇವ ಆಸ್ಪತ್ರೆ ನಿಲ್ದಾಣದ ಹೆಗ್ಗಳಿಕೆಗೆ ಸದ್ಯದಲ್ಲೇ ಕುಂದು ಬರಲಿದ್ದು, ಗೊರಗುಂಟೆಪಾಳ್ಯ ಮತ್ತು ಮೈಸೂರು ರಸ್ತೆಯಲ್ಲಿ ಜಯದೇವಕ್ಕಿಂತ ಎತ್ತರದ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

‘ಆರು ಹಂತಗಳಲ್ಲಿ ನಿರ್ಮಾಣಗೊಂಡಿರುವ ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಭೂಗತ ಮಾರ್ಗದಲ್ಲಿ ಕಾಳೇನ ಅಗ್ರಹಾರ–ನಾಗವಾರ ಸಂಪರ್ಕಿಸುವ ಗುಲಾಬಿ ಮೆಟ್ರೊ ಹಾದು ಹೋಗಲು ಸುರಂಗ ಮಾರ್ಗವಿದೆ. ಅದರ ಮೇಲೆ ರಸ್ತೆ ನಿರ್ಮಿಸಲಾಗಿದೆ. ಅದರ ಮೇಲೆ ಹಳದಿ ಮೆಟ್ರೊ ರೈಲು ಹಾದು ಹೋಗುತ್ತಿದೆ. ಈ ನಿಲ್ದಾಣವು 29 ಮೀಟರ್‌ ಎತ್ತರವಿದೆ.

ಮೂರನೇ ಹಂತದಲ್ಲಿ ಎರಡು ಕಾರಿಡಾರ್‌ಗಳಿಗೆ ಅನುಮೋದನೆ ದೊರಕಿದೆ. ಈ ಕಾರಿಡಾರ್‌ಗಳಲ್ಲಿ ಗೊರಗುಂಟೆ ಪಾಳ್ಯದಲ್ಲಿ 33 ಮೀಟರ್‌ ಎತ್ತರದ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಮೈಸೂರು ರಸ್ತೆಯಲ್ಲಿ 32 ಮೀಟರ್‌ ಎತ್ತರದ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣಗೊಳ್ಳಲಿದೆ. ಈ ಮೂರು ನಿಲ್ದಾಣಗಳು ದೇಶದ ಅತಿ ಎತ್ತರದ ಮೊದಲ ಮೂರು ಸ್ಥಾನಗಳಲ್ಲಿರುವ ನಿಲ್ದಾಣಗಳು ಎಂಬ ಹೆಗ್ಗಳಿಕೆ ಪಡೆಯಲಿವೆ.

ADVERTISEMENT

ಜೆ.ಪಿ. ನಗರ–ಕೆಂಪಾಪುರ ನಡುವಿನ ಕಿತ್ತಳೆ ಮಾರ್ಗವು 32.3 ಕಿ.ಮೀ. ಉದ್ದವಿದ್ದು, ಹೊಸಹಳ್ಳಿ–ಕಡಬಗೆರೆ ಸಂಪರ್ಕಿಸುವ ಬೆಳ್ಳಿ ಮಾರ್ಗವು 12.15 ಕಿ.ಮೀ. ಇದೆ. ಮೂರನೇ ಹಂತದ ಈ ಎರಡೂ ಕಾರಿಡಾರ್‌ಗಳು ಡಬಲ್ ಡೆಕರ್‌ ವ್ಯವಸ್ಥೆಯನ್ನು ಹೊಂದಿವೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಎರಡು ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಹಿಂದೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸಲಾಗಿತ್ತು. ಅದರ ಪ್ರಕಾರ ಕಿತ್ತಳೆ ಮಾರ್ಗವು ಹಸಿರು ಮಾರ್ಗವನ್ನು ಪೀಣ್ಯದಲ್ಲಿ ಸಂಪರ್ಕಿಸುವುದರಿಂದ ಅಲ್ಲಿ ಇಂಟರ್‌ಚೇಂಜ್‌ ನಿಲ್ದಾಣ ನಿರ್ಮಾಣಗೊಳ್ಳಬೇಕಿತ್ತು. ಆನಂತರ ಈ ಯೋಜನೆಗೆ ಡಬಲ್‌ ಡೆಕರ್‌ ಸೇರಿಸಿ ಹೊಸ ಡಿಪಿಆರ್‌ ತಯಾರಿಸಲು ಸೂಚಿಸಲಾಗಿತ್ತು. ಮೊದಲೇ ಕಡಿದಾದ ಇಳಿಜಾರು ಹೊಂದಿರುವ ಪೀಣ್ಯದಲ್ಲಿ ಡಬಲ್ ಡೆಕರ್‌ ಸೇರ್ಪಡೆ ಮಾಡಿದರೆ 46 ಮೀಟರ್‌ ಎತ್ತರದ ನಿಲ್ದಾಣ ನಿರ್ಮಿಸಬೇಕಿತ್ತು. ಅದಕ್ಕಾಗಿ ಪೀಣ್ಯ ಬದಲು ಗೊರಗುಂಟೆಪಾಳ್ಯದಲ್ಲಿ ಹಸಿರು ಮಾರ್ಗವನ್ನು ಕಿತ್ತಳೆ ಮಾರ್ಗ ಸಂಪರ್ಕಿಸುವಂತೆ ಹೊಸ ಡಿಪಿಆರ್ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

‘ಈ ಬದಲಾವಣೆಯಿಂದಾಗಿ ಕಿತ್ತಳೆ ಮಾರ್ಗ–ಹಸಿರು ಮಾರ್ಗ ಜೋಡಣೆಯು 200 ಮೀಟರ್‌ ಕಡಿತಗೊಳ್ಳಲಿದೆ. ವೆಚ್ಚವು ₹669 ಕೋಟಿ ಕಡಿಮೆಯಾಗಲಿದೆ. 2031ರ ಹೊತ್ತಿಗೆ ಈ ಮಾರ್ಗ ಸಿದ್ಧಗೊಳ್ಳಲಿದೆ’ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.