ADVERTISEMENT

ಬೆಂಗಳೂರು: ನರ್ಸಿಂಗ್‌ ವಿದ್ಯಾರ್ಥಿನಿಗೆ ಇರಿದ ಮನೆ ಕೆಲಸದಾಕೆ

ವೈಯಾಲಿ ಕಾವಲ್ ಠಾಣೆಯಲ್ಲಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2025, 16:15 IST
Last Updated 11 ಆಗಸ್ಟ್ 2025, 16:15 IST
   

ಬೆಂಗಳೂರು: ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಗೆ ಚಾಕುವಿನಿಂದ ಹಲ್ಲೆ ನಡೆಸಿದ್ದ ಆರೋಪದ ಅಡಿ ಮನೆಯ ಕೆಲಸದಾಕೆಯನ್ನು ವೈಯಾಲಿಕಾವಲ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಜಿ. ಲಲಿತಾ(45) ಬಂಧಿತ ಆರೋಪಿ.

ಹಲ್ಲೆಯಿಂದ ವಿದ್ಯಾರ್ಥಿನಿ ಪಿ.ಸುಶ್ಮಿತಾ (21) ಅವರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ತಡರಾತ್ರಿ ಘಟನೆ ನಡೆದಿದೆ. ಈ ಸಂಬಂಧ ಬಂದ ದೂರು ಆಧರಿಸಿ ಲಲಿತಾ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ಬಸಪ್ಪ ಗಾರ್ಡನ್‌ನ ವೇಣುಗೋಪಾಲ್ ಮತ್ತು ಸರೋಜಮ್ಮ ದಂಪತಿ ಮನೆಯಲ್ಲಿ ಆರೋಪಿ ಲಲಿತಾ ಅವರು ಕೆಲಸ ಮಾಡುತ್ತಿದ್ದರು. ಮಹದೇವಪುರದ ಕಾಲೇಜಿನ ವಿದ್ಯಾರ್ಥಿನಿ ಸುಶ್ಮಿತಾ. ಕಾಲೇಜಿನ ಬಳಿ ಪೇಯಿಂಗ್ ಗೆಸ್ಟ್‌ನಲ್ಲಿ (ಪಿ.ಜಿ) ವಾಸಿಸುತ್ತಿದ್ದರು. ಸುಶ್ಮಿತಾ ಅವರ ಪೋಷಕರು ಹಾಗೂ ವೇಣುಗೋಪಾಲ್‌ ಪರಿಚಯವಿದ್ದರು. ಹೀಗಾಗಿ ವೇಣುಗೋಪಾಲ್ ಅವರ ಮನೆಗೆ ಸುಶ್ಮಿತಾ ಅವರು ಬಂದು ಹೋಗುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬಕ್ಕೆಂದು ಶುಕ್ರವಾರ ಬಂದಿದ್ದರು. ಆ ದಿನ ಲಲಿತಾ ಅವರ ಕೆಲಸದ ಬಗ್ಗೆ ಸುಶ್ಮಿತಾ ಅಸಮಾಧಾನ ವ್ಯಕ್ತಪಡಿಸಿ, ನಿಂದಿಸಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಲಲಿತಾ ಅವರು ಸಿಟ್ಟಿಗೆದ್ದು ಕೂಗಾಟ ನಡೆಸಿದ್ದರು ಎಂದು ಮೂಲಗಳು ತಿಳಿಸಿವೆ.

‘ಚಿಕ್ಕ ಹುಡುಗಿಯಿಂದ ಕೆಲಸ ಕಲಿಯಬೇಕಾಗಿಲ್ಲ’ ಎಂದು ಆರೋಪಿ ಕೂಗಾಡಿದ್ದರು. ಸುಶ್ಮಿತಾ ಅವರು ಮಲಗಿದ್ದ ಮೂರನೆಯ ಮಹಡಿಯಲ್ಲಿದ್ದ ಕೋಣೆಗೆ ತೆರಳಿ ಮನೆಯಲ್ಲಿದ್ದ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿ ಆಗಿದ್ದಳು. ಹಲ್ಲೆಯಿಂದಾಗಿ ಸುಶ್ಮಿತಾ ಪ್ರಜ್ಞೆ ಕಳೆದುಕೊಂಡಿದ್ದರು’ ಎಂದು ಪೊಲೀಸರು ಹೇಳಿದರು.

‘ಮುಂಜಾನೆ ಮೂರು ಗಂಟೆಯ ಸುಮಾರಿಗೆ ಸುಶ್ಮಿತಾ ಅವರಿಗೆ ಪ್ರಜ್ಞೆ ಬಂದಿತ್ತು. ಸರೋಜಾ ಅವರ ಮೊಬೈಲ್‌ಗೆ ಕರೆ ಮಾಡಿ ಆಂಟಿ ಬೇಗ ಬಂದು ಕಾಪಾಡಿ ಎಂದು ಕೇಳಿಕೊಂಡಿದ್ದರು. ವೇಣುಗೋಪಾಲ್ ಕೊಠಡಿಗೆ ತೆರಳಿ ನೋಡಿದಾಗ ವಿದ್ಯಾರ್ಥಿನಿ ರಕ್ತದಮಡುವಿನಲ್ಲಿ ಬಿದ್ದಿದ್ದರು’ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.