
ಬೆಂಗಳೂರು: ‘ಚಿಕ್ಕಬಳ್ಳಾಪುರ ತಾಲ್ಲೂಕು ಕಸಬಾ ಹೋಬಳಿಯ ಸ್ಕಂದಗಿರಿ ತಪ್ಪಲಿನಲ್ಲಿ ಇರುವ ಓಂಕಾರ ಜ್ಯೋತಿ ಮಠ ಟ್ರಸ್ಟ್‌ನ ಆಸ್ತಿ ಕಬಳಿಸಲು ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನಾರಾಯಣ ಷಡ್ಯಂತ್ರ ನಡೆಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಮಠದ ಅಧ್ಯಕ್ಷ ಉಮಾ ಮಹೇಶ್ವರ ಸ್ವಾಮೀಜಿ ಆರೋಪಿಸಿದರು.
ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಠದ ಆಸ್ತಿಯನ್ನು ಬಲವಂತವಾಗಿ ಪಡೆಯಲು ಲಕ್ಷ್ಮೀನಾರಾಯಣ ಹಾಗೂ ಇತರರು ಜ. 10ರಂದು ಏಕಾಏಕಿ ಮಠಕ್ಕೆ ನುಗ್ಗಿ, ನನ್ನ ಮೇಲೆ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ' ಎಂದು ತಿಳಿಸಿದರು.
ಕೊಠಡಿಯಲ್ಲಿ ಕೂಡಿಹಾಕಿ, ಮಠದಿಂದ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ. ಆದರೆ, ಇದುವರೆಗೂ ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ. ದೌರ್ಜನ್ಯವೆಸಗಿದ ಹಾಗೂ ಕರ್ತವ್ಯ ನಿರ್ಲಕ್ಷ್ಯ ಮಾಡಿದ ಪೊಲೀಸರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಂಡು ಮಠದ ಆಸ್ತಿ ರಕ್ಷಿಸಬೇಕು ಎಂದು ಒತ್ತಾಯಿಸಿದರು.
'ಮರಿಯಪ್ಪ ಎಂಬುವರು 26 ವರ್ಷಗಳ ಹಿಂದೆ ಇಲ್ಲಿ 2 ಎಕರೆ 12 ಗುಂಟೆ ಜಮೀನು ಖರೀದಿಸಿ ಮಠ ಸ್ಥಾಪಿಸಿದ್ದರು. ಬಳಿಕ ಅವರ ಪತ್ನಿ ಜಯಮ್ಮ ಅವರು ಮಠದ ಹೊಣೆ ಹೊತ್ತುಕೊಂಡರು. ಬಳಿಕ ಇದೇ ತಿಂಗಳ 9 ರಂದು ನನ್ನ ಪಟ್ಟಾಭಿಷೇಕ ಸಮಾರಂಭ ನೆರವೇರಿತು. ನಾನು ಪೀಠಾಧಿಪತಿಯಾಗಿದ್ದು, ಜಯಮ್ಮ ಅವರು ಗೌರವ ಅಧ್ಯಕ್ಷೆಯಾಗಿದ್ದಾರೆ. ಆದರೆ, ನಮ್ಮ ಮೇಲೆ ದಾಳಿ ಮಾಡಿದವರು ಹಿಂದೆಂದೂ ಮಠದ ಬಳಿ ಬಂದಿರಲಿಲ್ಲ. ಇದೀಗ ತಾವು ಜಯಮ್ಮ ಅವರ ರಕ್ತ ಸಂಬಂಧಿ, ಮಠ ತೆರವುಗೊಳಿಸಬೇಕು. ಈ ಜಾಗ ತಮ್ಮದು ಎಂದು ಗಲಾಟೆ ಮಾಡುತ್ತಿದ್ದಾರೆ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.