ADVERTISEMENT

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅವ್ಯವಸ್ಥೆ: ಸರ್ಕಾರಕ್ಕೆ ಶೀಘ್ರವೇ ವರದಿ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2025, 23:54 IST
Last Updated 14 ಡಿಸೆಂಬರ್ 2025, 23:54 IST
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ   

ಬೆಂಗಳೂರು: ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ, ಕೈದಿಗಳಿಂದ ಮೊಬೈಲ್ ಬಳಕೆ, ಮದ್ಯ ಕುಡಿದು ನೃತ್ಯ ಮಾಡಿದ ವಿಡಿಯೊ ಹಾಗೂ ಜೈಲುಗಳಲ್ಲಿ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದಂತೆ ರಚಿಸಲಾಗಿದ್ದ ಉನ್ನತ ಮಟ್ಟದ ಸಮಿತಿಯು ಶೀಘ್ರದಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಅತ್ಯಾಚಾರ, ಸರಣಿ ಕೊಲೆ ಪಾತಕಿ ಉಮೇಶ್ ರೆಡ್ಡಿ, ಇಸ್ಲಾಮಿಕ್‌ ಸ್ಟೇಟ್‌ (ಐಎಸ್‌) ಭಯೋತ್ಪಾದಕ ಸಂಘಟನೆಯ ಉಗ್ರ ಜುಹಾದ್ ಹಮೀದ್ ಶಕೀಲ್ ಮನ್ನಾ, ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದ ಆರೋಪಿ ತರುಣ್ ರಾಜ್‌ ತಾವಿರುವ ಬ್ಯಾರಕ್‌ನಲ್ಲಿ ಮೊಬೈಲ್‌ನಲ್ಲಿ ಮಾತನಾಡುತ್ತಿರುವ, ಟಿ.ವಿ ವೀಕ್ಷಣೆ ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.

ಅದರ ಬೆನ್ನಲ್ಲೇ, ಮಾಂಸ, ಮದ್ಯ ಸೇವಿಸಿ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳು ನೃತ್ಯ ಮಾಡುತ್ತಿರುವ ವಿಡಿಯೊ ಸಹ ಜಾಲತಾಣದಲ್ಲಿ ಹರಿದಾಡಿತ್ತು.

ADVERTISEMENT

ಜೈಲಿನಲ್ಲಿ ಕೈದಿಗಳಿಗೆ ರಾಜಾತಿಥ್ಯ ಕಲ್ಪಿಸಿರುವ ಕುರಿತು ತೀವ್ರ ಚರ್ಚೆಯಾಗಿತ್ತು. ಗೃಹ ಸಚಿವ ಜಿ.ಪರಮೇಶ್ವರ ಅವರು ಕಾರಾಗೃಹ ಹಾಗೂ ಸುಧಾರಣೆಗಳ ಇಲಾಖೆ ಹಾಗೂ ಪೊಲೀಸರ ಸಭೆ ನಡೆಸಿದ್ದರು. ಸಭೆಯ ಬಳಿಕ ಜೈಲುಗಳಲ್ಲಿ ವ್ಯವಸ್ಥೆಯ ಸುಧಾರಣೆಗೆ ಉನ್ನತ ಮಟ್ಟದ ಸಮಿತಿ ರಚಿಸಿ ಆದೇಶಿಸಿದ್ದರು. ತಿಂಗಳ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್.ಹಿತೇಂದ್ರ ಅವರನ್ನು ಮುಖ್ಯಸ್ಥರನ್ನಾಗಿ ಮಾಡಲಾಗಿತ್ತು. ‌ಕೆಎಸ್‌ಆರ್‌ಪಿ ಐಜಿಪಿ ಸಂದೀಪ್ ಪಾಟೀಲ, ಎಸ್‌ಪಿಗಳಾದ ಅಮರನಾಥ್ ರೆಡ್ಡಿ, ರಿಷ್ಯಾಂತ್‌ ಅವರನ್ನು ಒಳಗೊಂಡ ಅಧಿಕಾರಿಗಳು ಹಾಗೂ ರಾಜ್ಯದ ವಿವಿಧ ಜೈಲುಗಳ ತನಿಖೆ ನಡೆಸಲು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಎಸ್‌ಪಿಗಳನ್ನು ಸಮಿತಿಯ ಸಹ ಸದಸ್ಯರನ್ನಾಗಿ ನೇಮಿಸಲಾಗಿತ್ತು.

ಸಮಿತಿಯು ತಿಹಾರ್‌ ಜೈಲಿಗೆ ಭೇಟಿ ನೀಡಿ, ಅಲ್ಲಿನ ಅಧಿಕಾರಿಗಳ ಜತೆಗೆ ಚರ್ಚಿಸಿ ಕೈದಿಗಳಿಗೆ ನೀಡಿರುವ ಸೌಲಭ್ಯಗಳು ಹಾಗೂ ಸುಧಾರಣಾತ್ಮಕ ಅಂಶಗಳ ಬಗ್ಗೆ ಅಧ್ಯಯನ ನಡೆಸಿದೆ. ಜೈಲಿನ ಕೈಪಿಡಿ ಪ್ರಕಾರ ಕೈದಿಗಳಿಗೆ ಯಾವೆಲ್ಲಾ ಸೌಲಭ್ಯ ನೀಡಲಾಗುತ್ತಿದೆ? ಜೈಲಿನ ಆಡಳಿತ ಜಾರಿಗೆ ತಂದಿರುವ ಅಂಶಗಳ ಬಗ್ಗೆ, ಬಂದಿಗಳಿಗೆ ರೂಪಿಸಿರುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆದಿದೆ.

ರಾಜ್ಯದಲ್ಲಿರುವ ಇತರೆ ಕೇಂದ್ರ ಕಾರಾಗೃಹಗಳು ಹಾಗೂ ಜಿಲ್ಲಾ ಕಾರಾಗೃಹಗಳಿಗೂ ಈ ಸಮಿತಿ ಭೇಟಿ ನೀಡಿ ಅಧ್ಯಯನ ನಡೆಸಿ, ಮಾಹಿತಿ ಸಂಗ್ರಹಿಸಿದೆ. ಪರಪ್ಪನ ಅಗ್ರಹಾರದ ಜೈಲಿಗೂ ಸಮಿತಿ ಭೇಟಿ ನೀಡಿ, ಅಧಿಕಾರಿಗಳು ಮತ್ತು ಸಿಬ್ಬಂದಿಯ ಹೇಳಿಕೆ ದಾಖಲಿಸಿಕೊಂಡಿದೆ.

ಕೈದಿಗಳ ವಿಡಿಯೊ ಬಗ್ಗೆ ಪ್ರಾಥಮಿಕ ತನಿಖೆ ವರದಿಯನ್ನಾಧರಿಸಿ, ಪರಪ್ಪನ ಅಗ್ರಹಾರ ಕಾರಾಗೃಹದ ಮುಖ್ಯ ಅಧೀಕ್ಷಕ ಕೆ. ಸುರೇಶ್‌ ಅವರನ್ನು ವರ್ಗಾಯಿಸಿ, ಜೈಲಿನ ಸೂಪರಿಂಟೆಂಡೆಂಟ್ ಇಮಾಮ್‌ಸಾಬ್‌ ಮ್ಯಾಗೇರಿ ಹಾಗೂ ಸಹಾಯಕ ಸೂಪರಿಂಟೆಂಡೆಂಟ್ ಅಶೋಕ್ ಭಜಂತ್ರಿ ಅವರನ್ನು ಅಮಾನತುಗೊಳಿಸಲಾಗಿತ್ತು. ಕಾರಾಗೃಹದ ಮುಖ್ಯ ಸೂಪರಿಂಟೆಂಡೆಂಟ್ ಜಾಗಕ್ಕೆ ಮೊದಲ ಬಾರಿಗೆ ಐಪಿಎಸ್‌ ಅಧಿಕಾರಿ ಅನ್ಶು ಕುಮಾರ್ ಅವರನ್ನು ನಿಯೋಜಿಸಿತ್ತು.


ಪರಪ್ಪನ ಅಗ್ರಹಾರ ಜೈಲಿನಲ್ಲಿ ಪೊಲೀಸ್ ಅಧೀಕ್ಷಕರು, ಮುಖ್ಯ ಅಧೀಕ್ಷಕರ ಕಚೇರಿ ಹಾಗೂ ಕಾರಾಗೃಹ ಅಧಿಕಾರಿಗಳು ಇತ್ತೀಚೆಗೆ ನಡೆಸಿದ ದೀಢಿರ್‌ ದಾಳಿಯ ವೇಳೆ 73 ಮೊಬೈಲ್‌ಗಳು, ಚಾರ್ಜರ್, ಸಿಮ್‌ಕಾರ್ಡ್‌ ಹಾಗೂ ನಗದು ವಶಪಡಿಸಿಕೊಂಡಿದ್ದರು. ಈ ಸಂಬಂಧ ಏಳು ಎಫ್‌ಐಆರ್ ದಾಖಲಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.