ADVERTISEMENT

ನೀರಿನ ಬಕೆಟ್‌ನಲ್ಲಿ ಮಗು ಕಾಲಿಟ್ಟದ್ದಕ್ಕೆ ಗಲಾಟೆ: ಪೋಷಕರಿಗೆ ಬ್ಯಾಟ್‌ನಿಂದ ಥಳಿತ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 16:10 IST
Last Updated 17 ಆಗಸ್ಟ್ 2025, 16:10 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಬೆಂಗಳೂರು: ಆರು ವರ್ಷದ ಮಗು ಎದುರು ಮನೆಯ ನೀರಿನ ಬಕೆಟ್‍ನಲ್ಲಿ ಕಾಲಿಟ್ಟ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿ, ಮಗುವಿನ ಪೋಷಕರಿಗೆ ಕ್ರಿಕೆಟ್ ಬ್ಯಾಟ್ ಮತ್ತು ವಿಕೆಟ್‍ನಿಂದ ಥಳಿಸಿರುವ ಘಟನೆ ಬ್ಯಾಡರಹಳ್ಳಿ ಬಳಿಯ ವಿದ್ಯಾಮಾನ್ಯ ನಗರದಲ್ಲಿ ನಡೆದಿದೆ.

ಗಂಗಾಧರ್ ಮತ್ತು ಸೌಮ್ಯಾ ದಂಪತಿ ನೀಡಿದ ದೂರು ಆಧರಿಸಿ, ರಾಜೇಶ್ವರಿ ಹಾಗೂ ಅವರ ಮಗನ ವಿರುದ್ಧ ಬ್ಯಾಡರಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

‘ಗಂಗಾಧರ್ ದಂಪತಿಯ ಮನೆಯ ಮುಂಭಾಗದಲ್ಲೇ ರಾಜೇಶ್ವರಿ ಅವರ ಮನೆಯಿದೆ. ದಂಪತಿಯ ಆರು ವರ್ಷದ ಮಗು, ಆಗಸ್ಟ್‌ 14ರಂದು ಆಟವಾಡುತ್ತಾ ರಾಜೇಶ್ವರಿ ಅವರ ಮನೆಯ ಬಳಿ ಹೋಗಿ ನೀರಿನ ಬಕೆಟ್‍ನ ಒಳಗೆ ಕಾಲು ಹಾಕಿತ್ತು. ಈ ವಿಚಾರಕ್ಕೆ ರಾಜೇಶ್ವರಿ ಮತ್ತು ಸೌಮ್ಯಾ ನಡುವೆ ಗಲಾಟೆಯಾಗಿತ್ತು. ಬಳಿಕ ಅದೇ ದಿನ ರಾತ್ರಿ ರಾಜೇಶ್ವರಿ ಅವರ ಮಗ ತನ್ನ ಸಹಚರರೊಂದಿಗೆ ಸೌಮ್ಯಾ ಅವರ ಮನೆ ಬಳಿ ಹೋಗಿ, ಕಿಟಕಿಗಳ ಗಾಜು ಒಡೆದು ದಾಂದಲೆ ನಡೆಸಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಬಳಿಕ ಗಂಗಾಧರ್ ಅವರನ್ನು ರಸ್ತೆಗೆ ಎಳೆದುಕೊಂಡು ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ, ಬ್ಯಾಟ್ ಮತ್ತು ವಿಕೆಟ್‍ಗಳಿಂದ ಮನಬಂದಂತೆ ಹೊಡೆದಿದ್ದಾರೆ. ಈ ವೇಳೆ ಪತಿಯ ರಕ್ಷಣೆಗೆ ಧಾವಿಸಿದ ಸೌಮ್ಯಾ ಅವರನ್ನು ಆರೋಪಿಗಳು ಸಾರ್ವಜನಿಕವಾಗಿ ಎಳೆದಾಡಿದ್ದಾರೆ. ನಂತರ ಕಾಲಿನಿಂದ ಒದ್ದು, ಬ್ಯಾಟ್ ಮತ್ತು ವಿಕೆಟ್‍ನಿಂದ ಥಳಿಸಿ, ಜೀವ ಬೆದರಿಕೆ ಹಾಕಿದ್ದಾರೆ.  ದೌರ್ಜನ್ಯದ ದೃಶ್ಯಾವಳಿಯು ಘಟನಾ ಸ್ಥಳದ ಸಿ.ಸಿ.ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಘಟನೆ ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ದಂಪತಿಯ ದೂರು ಆಧರಿಸಿ, ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.