ADVERTISEMENT

ಬೆಂಗಳೂರು | ವಾಹನ ನಿಲುಗಡೆ ವಿಚಾರಕ್ಕೆ ಗಲಾಟೆ: ನಾಲ್ವರಿಗೆ ಇರಿದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2025, 14:03 IST
Last Updated 27 ಸೆಪ್ಟೆಂಬರ್ 2025, 14:03 IST
   

ಬೆಂಗಳೂರು: ವಾಹನ ನಿಲುಗಡೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ನಾಲ್ವರಿಗೆ ಚಾಕುವಿನಿಂದ ಇರಿದಿದ್ದ ಆರೋಪಿಯನ್ನು ಕೆ.ಆರ್. ಪುರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ವೆಂಕಟೇಶ್ ಬಂಧಿತ ಆರೋಪಿ. ಠಾಣಾ ವ್ಯಾಪ್ತಿಯ ಮಾರಗೊಂಡನಹಳ್ಳಿಯ ಆರ್‌.ಆರ್. ಲೇಔಟ್‌ನಲ್ಲಿ ಘಟನೆ ನಡೆದಿತ್ತು.

‘ಸೆ.24ರಂದು ಹೇಮಂತ್, ಹನುಮಂತಮ್ಮ, ರಮೇಶ್ ಹಾಗೂ ಒಬ್ಬ ಬಾಲಕನಿಗೆ ಆರೋಪಿ ಇರಿದು ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ADVERTISEMENT

‘ಬುಧವಾರ ರಾತ್ರಿ 8.30 ಸುಮಾರಿಗೆ ತಮ್ಮ ದೊಡ್ಡಪ್ಪ ರಮೇಶ್​ ಜತೆಗೆ ಹೇಮಂತ್ ಅವರು ಮನೆಯ ಎದುರು ಕುಳಿತಿದ್ದರು. ಈ ವೇಳೆ ವೇಗವಾಗಿ ಬಂದ ಸ್ಕಾರ್ಪಿಯೊ ವಾಹನವೊಂದು ರಸ್ತೆಯಲ್ಲಿದ್ದ ಮೋರಿಯ ಬಳಿ ನಿಲುಗಡೆ ಮಾಡಲಾಗಿತ್ತು. ವಾಹನ ವೇಗವಾಗಿ ಬಂದಿರುವುದನ್ನು ಗಮನಿಸಿದ್ದ ಹೇಮಂತ್ ಅವರು​ ‘ಏಕಿ ಇಷ್ಟು ವೇಗವಾಗಿ ಬರುತ್ತೀರಾ’ ಎಂದು ಚಾಲಕ ವೆಂಕಟೇಶ್‌ನನ್ನು ಪ್ರಶ್ನಿಸಿದ್ದರು. ಆಗ ಇಬ್ಬರ ನಡುವೆ ನಡೆದ ಗಲಾಟೆ ವಿಕೋಪಕ್ಕೆ ಹೋಗಿ ಆರೋಪಿ ವೆಂಕಟೇಶ್​ ಕಾರಿನಿಂದ ಚಾಕು ತಂದು ನಾಲ್ವರ ಮೇಲೆ ಹಲ್ಲೆ ನಡೆಸಿ ಇರಿದು ಪರಾರಿಯಾಗಿದ್ದ. ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾದ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಪೊಲೀಸರು ಹೇಳಿದರು.

ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.