ADVERTISEMENT

ಬೆಂಗಳೂರು | PGಗೆ ನುಗ್ಗಿ ಯುವತಿಗೆ ಲೈಂಗಿಕ ಕಿರುಕುಳ: ನಗದು ಕಸಿದುಕೊಂಡು ಪರಾರಿ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 23:30 IST
Last Updated 31 ಆಗಸ್ಟ್ 2025, 23:30 IST
   

ಬೆಂಗಳೂರು: ಕಳ್ಳತನ ಮಾಡಲು ಮಹಿಳಾ ಪೇಯಿಂಗ್ ಗೆಸ್ಟ್‌ಗೆ ಮಧ್ಯರಾತ್ರಿ ನುಗ್ಗಿದ್ದ ವ್ಯಕ್ತಿಯೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿ, ನಗದು ಕಸಿದುಕೊಂಡು ಪರಾರಿಯಾಗಿರುವ ಘಟನೆ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಬಿಟಿಎಂ ಲೇಔಟ್ ಗಂಗೋತ್ರಿ ಸರ್ಕಲ್ ಹತ್ತಿರದ ಪಿ.ಜಿ.ಯಲ್ಲಿ ಆಗಸ್ಟ್‌ 29ರ ನಸುಕಿನ 3.30ರ ಸುಮಾರಿಗೆ ಈ ಘಟನೆ ನಡೆದಿದೆ. ಪಿ.ಜಿ.ಯ ಎಲ್ಲ ಕೊಠಡಿಗಳನ್ನು ಹೊರಗಿನಿಂದ ಲಾಕ್ ಮಾಡಿದ ಆರೋಪಿ, ಯುವತಿ ಮಲಗಿದ್ದ ಕೊಠಡಿಗೆ ನುಗ್ಗಿ ಕೈ, ಕಾಲುಗಳನ್ನು ಮುಟ್ಟಿ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.

ಎಚ್ಚೆತ್ತ ಯುವತಿ ಜೋರಾಗಿ ಕೂಗಿಕೊಂಡಿದ್ದಾಳೆ. ಆದರೆ, ಪಕ್ಕದ ಕೊಠಡಿಗಳನ್ನು ಹೊರಗಿನಿಂದ ಲಾಕ್ ಮಾಡಿದ್ದರ ಪರಿಣಾಮ ಸಹಾಯಕ್ಕೆ ಬರಲು ಯಾರಿಗೂ ಸಾಧ್ಯವಾಗಿಲ್ಲ. ಪ್ರತಿರೋಧ ವ್ಯಕ್ತಪಡಿಸಿದ್ದ ಯುವತಿಗೆ ಚಾಕು ತೋರಿಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಷ್ಟರಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಹೊರಗೆ ಓಡಿ ಬಂದು, ಆತನನ್ನು ಹಿಡಿಯಲು ಯತ್ನಿಸಿದ್ದಾಳೆ. ಆದರೆ, ಆರೋಪಿ ಆಕೆ ಮೇಲೆಯೇ ಹಲ್ಲೆೆ ನಡೆಸಿ, ತಳ್ಳಿ ಪರಾರಿಯಾಗಿದ್ದಾನೆ.

ADVERTISEMENT

ಈ ದೃಶ್ಯ ಪಿ.ಜಿ.ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕೊಠಡಿಯಲ್ಲಿದ್ದ ₹2,500 ಹಣದೊಂದಿಗೆ ಆರೋಪಿ ಪರಾರಿಯಾಗಿದ್ದಾನೆ. ಯುವತಿ ಹೇಳಿಕೆ ಆಧರಿಸಿ ಸುದ್ದಗುಂಟೆ ಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆ ಕಾರ್ಯ ನಡೆದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.