ಬೆಂಗಳೂರು: ನಗರವನ್ನು ಪ್ಲಾಸ್ಟಿಕ್ ಮುಕ್ತವನ್ನಾಗಿ ಮಾಡುವ ಉದ್ದೇಶದಿಂದ 27 ತಂಡಗಳನ್ನು ರಚಿಸಿ ನಿತ್ಯ ಕಾರ್ಯಾಚರಣೆ ಮಾಡಲಾಗುತ್ತಿದೆ ಎಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ನಿಯಮಿತದ (ಬಿಎಸ್‌ಡಬ್ಲ್ಯುಎಂಎಲ್) ಸಿಇಒ ಕರೀಗೌಡ ತಿಳಿಸಿದರು.
‘ಬಿಎಸ್‌ಡಬ್ಲ್ಯುಎಂಎಲ್‌ನ ಸಹಾಯಕ ಪ್ರಧಾನ ವ್ಯವಸ್ಥಾಪಕರ ನೇತೃತ್ವದಲ್ಲಿ ರಚಿಸಿರುವ ತಂಡಗಳು ಪ್ಲಾಸ್ಟಿಕ್ ತಯಾರಕರು, ಸಗಟು ಮಾರಾಟದ ಸ್ಥಳಗಳ ಮೇಲೆ ದಾಳಿ ಮಾಡಿ ಏಕ ಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡಿವೆ’ ಎಂದು ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾಹಿತಿ ನೀಡಿದರು.
ಸೆ.3ರಿಂದ ಕಾರ್ಯಾಚರಣೆ ಆರಂಭವಾಗಿದ್ದು, 281 ಸಗಟು ಮಾರಾಟಗಾರರಿಂದ ₹19.66 ಲಕ್ಷ ದಂಡ, 2,842 ಚಿಲ್ಲರೆ ವ್ಯಾಪಾರಿಗಳಿಂದ ₹18.41 ಲಕ್ಷ ದಂಡ ವಸೂಲಿ ಮಾಡಲಾಗಿದೆ. ₹49.14 ಲಕ್ಷ ಮೌಲ್ಯದ 24.57 ಟನ್ ಏಕಬಳಕೆಯ ಪ್ಲಾಸ್ಟಿಕ್ ವಶಪಡಿಸಿಕೊಂಡಿದ್ದು, ಒಟ್ಟು ₹38.07 ಲಕ್ಷ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
‘ವಾರ್ಡ್ ಮಟ್ಟದಲ್ಲಿ ವಾರ್ಡ್ ಮಾರ್ಷಲ್ ಮತ್ತು ವಾರ್ಡ್ ಕಿರಿಯ ಆರೋಗ್ಯ ಪರಿವೀಕ್ಷಕರು ಪ್ರತಿದಿನ ‘ಪ್ಲಾಸ್ಟಿಕ್ ರೈಡ್’ ನಡೆಸಿ, ಒಬ್ಬರಿಗೆ ಕನಿಷ್ಠ ₹2,000 ದಂಡ ವಿಧಿಸುವಂತೆ ಆದೇಶಿಸಲಾಗಿದೆ’ ಎಂದರು.
ನಾಗರಿಕರಲ್ಲಿ ಮನವಿ: ಸಾರ್ವಜನಿಕರು ಮಾರುಕಟ್ಟೆಗೆ ಹೋಗುವ ಮುನ್ನ ಕೈಚೀಲ ತೆಗೆದುಕೊಂಡು ಹೋಗಬೇಕು. ಮಾರಾಟಗಾರರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬದಲು ಬಟ್ಟೆ ಚೀಲ ಅಥವಾ ಪೇಪರ್ ಚೀಲವನ್ನು ಬಳಸುವ ಮೂಲಕ ಪರಿಸರ ಮಾಲಿನ್ಯ ತಡೆಗಟ್ಟಬೇಕು ಎಂದು ಮನವಿ ಮಾಡಿದರು.
ಸಮಯ ಪರಿಷ್ಕರಣೆ ಯಶಸ್ವಿ: ನಗರದಲ್ಲಿ ಸ್ವಚ್ಛತಾ ಕಾರ್ಯಗಳ ಗುಣಮಟ್ಟವನ್ನು ಹೆಚ್ಚಿಸಲು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದ ವಿವಿಧ ವಾರ್ಡ್‌ಗಳಲ್ಲಿ ಆಟೊ ಟಿಪ್ಪರ್‌ಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯ ಪರಿಷ್ಕರಿಸಲಾಗಿದೆ. ಆಗಸ್ಟ್ 25ರಿಂದ ವಾಹನಗಳ ಸ್ಕ್ಯಾನಿಂಗ್ ಸಮಯವನ್ನು ಬೆಳಿಗ್ಗೆ 5.30ರಿಂದ 6.30ರವರೆಗೆ ನಿಗದಿಪಡಿಸಲಾಗಿದೆ. ಇದರಿಂದ ತ್ಯಾಜ್ಯ ವಿಲೇವಾರಿಯಲ್ಲಿ ಸುಧಾರಣೆಯಾಗಿದೆ ಎಂದರು.
ಒಂದು ಗಂಟೆ ಮುಂಚಿತವಾಗಿ ತ್ಯಾಜ್ಯ ಸಂಗ್ರಹಣೆ ಆರಂಭವಾಗುವುದರಿಂದ, ಜನರ ದೈನಂದಿನ ಕಾರ್ಯವೈಖರಿಗೆ ಹೊಂದಾಣಿಕೆಯಾಗಿದೆ. ಆಟೊ ಟಿಪ್ಪರ್‌ಗಳ ಹಾಜರಾತಿಯಲ್ಲಿ ಗಣನೀಯವಾಗಿ ಪ್ರಗತಿ ಕಂಡುಬಂದಿದೆ. ಜನರು ಕೆಲಸಕ್ಕೆ ಹೊರಡುವ ಮೊದಲು ತ್ಯಾಜ್ಯವನ್ನು ಆಟೊ ಟಿಪ್ಪರ್‌ಗಳಿಗೆ ನೀಡುವುದರ ಮೂಲಕ ಎಲ್ಲೆಂದರಲ್ಲಿ ಎಸೆಯುವುದನ್ನು ತಡೆಗಟ್ಟುವುದಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
ಬಿಎಸ್‌ಡಬ್ಲ್ಯುಎಂಎಲ್ ಸಿಒಒ ರಮಾಮಣಿ, ಡಿಜಿಎಂಗಳಾದ ಧಾನ್ ನಾಯ್ಕ್, ಭೀಮೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.