ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಬಿಹಾರದಲ್ಲಿ ಪೊಲೀಸರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದ ವಿಡಿಯೊ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ, ಅದನ್ನು ಕರ್ನಾಟಕ ಪೊಲೀಸರ ಕೃತ್ಯವೆಂದು ಲಾಕ್‌ಡೌನ್ ಸಮಯದಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಪೊಲೀಸರ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ ಆರೋಪ ಎದುರಿಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾ ಹರೀಶ್ ಅವರನ್ನು ನಗರದ ಎಸಿಜೆಎಂ ನ್ಯಾಯಾಲಯ ಖುಲಾಸೆಗೊಳಿಸಿದೆ.
ಈ ಕುರಿತಂತೆ ಪ್ರಕರಣದ ವಿಚಾರಣೆ ನಡೆಸಿದ 47ನೇ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ನ್ಯಾಯಾಧೀಶ ಬಿ.ಸಿದ್ದರಾಜು ಆರೋಪಿಯನ್ನು ಆಪಾದನೆಗಳಿಂದ ಖುಲಾಸೆಗೊಳಿಸಿ ಆದೇಶಿಸಿದ್ದಾರೆ.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ‘ದೂರುದಾರರು ತಮ್ಮ ದೂರಿನೊಂದಿಗೆ ವಿಡಿಯೊ ಕ್ಲಿಪ್ಪಿಂಗ್ ಕೊಟ್ಟಿಲ್ಲ. ಆರೋಪಿಯ ಮೊಬೈಲ್ ನಂಬರ್ ಉಲ್ಲೇಖ ಮಾಡಿಲ್ಲ. ದೋಷಾರೋಪ ಪಟ್ಟಿಯಲ್ಲಿ ಕೊಟ್ಟ ಸ್ಕ್ರೀನ್ ಶಾಟ್ ಆರೋಪಿಯ ವಿಡಿಯೊಗೆ ಸಂಬಂಧಪಟ್ಪಿಲ್ಲ. ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಿದ ವಿಡಿಯೊದಲ್ಲಿ ಆರೋಪಿಯ ಧ್ವನಿ ಇಲ್ಲ ಎಂದು ಎಫ್‌ಎಸ್‌ಎಲ್ ವರದಿ ನೀಡಲಾಗಿದೆ. ಪೊಲೀಸರು ವಾಟ್ಸ್ ಆ್ಯಪ್ ಗ್ರೂಪಿನ ವಿವರ, ಸ್ವತಂತ್ರ ಸಾಕ್ಷಿಗಳನ್ನು ವಿಚಾರಣೆ ಮಾಡಿಲ್ಲ’ ಎಂಬ ಅಭಿಪ್ರಾಯದೊಂದಿಗೆ ನ್ಯಾಯಾಲಯ ಆರೋಪ ಮುಕ್ತಗೊಳಿಸಿದೆ. ಪದ್ಮಾ ಹರೀಶ್ ಪರ ಹೈಕೋರ್ಟ್ ವಕೀಲ ಸೂರ್ಯ ಮುಕುಂದರಾಜ್ ವಾದ ಮಂಡಿಸಿದ್ದರು.
ಪ್ರಕರಣವೇನು?: ಸಿಇಎನ್ (ಸೈಬರ್, ಎಕನಾಮಿಕ್ ಅಂಡ್ ನಾರ್ಕೊಟಿಕ್ ಕ್ರೈಂ) ಪೊಲೀಸ್ ಠಾಣೆಯಲ್ಲಿ ಸಬ್ ಇನ್‌ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅಕ್ಷತಾ ಕುರಕುಂದಿ 2021ರ ಮೇ 12ರಂದು ದೂರು ನೀಡಿ, ‘ಪೊಲೀಸ್ ಸಮವಸ್ತ್ರದಲ್ಲಿದ್ದ ಕೆಲವರು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ನಡೆಸುತ್ತಿದ್ದ ವಿಡಿಯೊ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಪದ್ಮಾ ಹರೀಶ್ ಎಂದು ಹೇಳಿಕೊಂಡಿದ್ದ ಮಹಿಳೆಯೊಬ್ಬರು ಅದನ್ನು ಕರ್ನಾಟಕ ಪೊಲೀಸರ ಕೃತ್ಯವೆಂದು ಬಿಂಬಿಸಿ ರಾಜ್ಯದ ಪೊಲೀಸರನ್ನು ನರಭಕ್ಷಕರೆಂದು ಕರೆದಿದ್ದರಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕೋವಿಡ್ ಸಂದರ್ಭದಲ್ಲಿ ಲಾಕ್‌ಡೌನ್ ನಿಯಮಗಳ ಜಾರಿಗೆ ಮುಂದಾಗಿದ್ದ ಪೊಲೀಸ್ ಸಿಬ್ಬಂದಿ ವಿರುದ್ಧ ಸಾರ್ವಜನಿಕರನ್ನು ಪ್ರಚೋದಿಸಿದ್ದಾರೆ’ ಎಂದು ಆರೋಪಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.