ಬೆಂಗಳೂರು: ನಗರದಲ್ಲಿ ಅಪರಾಧ ತಡೆಗಟ್ಟಲು ಹಾಗೂ ಪುಂಡರ ಹಾವಳಿ ನಿಯಂತ್ರಿಸುವ ಸಲುವಾಗಿ ಶನಿವಾರ ರಾತ್ರಿ 11 ರಿಂದ ಭಾನುವಾರ ಮುಂಜಾನೆ 5 ಗಂಟೆಯವರೆಗೂ ನಗರ ಪೊಲೀಸರು ಗಸ್ತು ನಡೆಸಿದ್ದಾರೆ.
ನಗರ ಪೊಲೀಸ್ ಕಮಿಷನರ್ ಸೀಮಾಂತ್ ಕುಮಾರ್ ಸಿಂಗ್ ಸಹ ಗಸ್ತಿನಲ್ಲಿ ಪಾಲ್ಗೊಂಡು, ಕಿರಿಯ ಅಧಿಕಾರಿಗಳಿಗೆ ಕೆಲವು ಸಲಹೆ, ಸೂಚನೆಗಳನ್ನು ನೀಡಿದರು. ಇತ್ತೀಚೆಗೆ ನಗರದಲ್ಲಿ ಪುಂಡರ ಹಾವಳಿ, ಗಲಾಟೆಗಳು ಹೆಚ್ಚಾಗುತ್ತಿರುವುದರಿಂದ ಕಮಿಷನರ್ ಸೂಚನೆ ಮೇರೆಗೆ ಆಯಾ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಗಸ್ತಿನಲ್ಲಿ ಭಾಗಿಯಾಗಿದ್ದರು.
ನಾಲ್ವರು ಹೆಚ್ಚುವರಿ ಪೊಲೀಸ್ ಆಯುಕ್ತರು, ಡಿ.ಸಿ.ಪಿ.ಗಳು, ಎಲ್ಲಾ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರು, ಇನ್‌ಸ್ಪೆಕ್ಟರ್‌ಗಳು, ಸಬ್ ಇನ್‌ಸ್ಪೆಕ್ಟರ್‌ಗಳು ಹಾಗೂ ಸಿಬ್ಬಂದಿ ವಿಶೇಷ ಗಸ್ತಿನಲ್ಲಿ ಪಾಲ್ಗೊಂಡು, ಪರಿಶೀಲನೆ ನಡೆಸಿದರು.
ನಗರದ ಕೆಲವು ಕಡೆ ಪೊಲೀಸರು ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿದರು. ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ, ದ್ವಿಚಕ್ರ ವಾಹನದಲ್ಲಿ ಮೂವರು ಹೋಗುತ್ತಿರುವುದು ಹಾಗೂ ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಲಾಡ್ಜ್, ಕ್ಲಬ್, ಹೋಟೆಲ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸ್, ರೈಲು ನಿಲ್ದಾಣ ಸೇರಿ ಸುತ್ತಮುತ್ತ ಪ್ರದೇಶಗಳಿಗೆ ಭೇಟಿ ನೀಡಿದರು.
ಪೊಲೀಸ್ ಕಮಿಷನರ್ ಅವರು ಮೆಜೆಸ್ಟಿಕ್‌ನಲ್ಲಿ ಗಸ್ತು ನಡೆಸಿದ ಬಳಿಕ ನಿರ್ಭಯ ಸಖಿ ಕೇಂದ್ರಕ್ಕೆ ಭೇಟಿ ನೀಡಿ, ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸಿದ್ದಾರೆ ಎಂಬುದು ತಿಳಿದು ಬಂದಿದೆ.
ಶುಕ್ರವಾರ ರಾತ್ರಿ ಪೊಲೀಸರು ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಿದ್ದರು. ಇದರ ಬೆನ್ನಲ್ಲೇ ನಗರದಲ್ಲಿ ಗಸ್ತು ನಡೆಸಿ, ನಾಗರಿಕರಲ್ಲಿ ಸ್ಥೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.