ADVERTISEMENT

ಬೆಂಗಳೂರು: ಇಂಗ್ಲೆಂಡ್​​ನ ಗಾಯಕ ಎಡ್ ಶೀರನ್ ‘ಸ್ಟ್ರೀಟ್’ ಸಂಗೀತಕ್ಕೆ ಪೊಲೀಸರ ತಡೆ

ಪಿಟಿಐ
Published 9 ಫೆಬ್ರುವರಿ 2025, 10:27 IST
Last Updated 9 ಫೆಬ್ರುವರಿ 2025, 10:27 IST
<div class="paragraphs"><p>ಬೆಂಗಳೂರು ಜನತೆಗೆ ಅಚ್ಚರಿ ನೀಡಲು ಬಂದು ಸ್ವತಃ ಶಾಕ್‌ಗೆ ಒಳಗಾದ ಪಾಪ್ ಗಾಯಕ!ಚರ್ಚ್‌ ಸ್ಟ್ರೀಟ್‌ನಲ್ಲಿ ಘಟನೆ</p></div>

ಬೆಂಗಳೂರು ಜನತೆಗೆ ಅಚ್ಚರಿ ನೀಡಲು ಬಂದು ಸ್ವತಃ ಶಾಕ್‌ಗೆ ಒಳಗಾದ ಪಾಪ್ ಗಾಯಕ!ಚರ್ಚ್‌ ಸ್ಟ್ರೀಟ್‌ನಲ್ಲಿ ಘಟನೆ

   

ಬೆಂಗಳೂರು: ಇಂಗ್ಲೆಂಡ್​​ನ ಖ್ಯಾತ ಗಾಯಕ ಮತ್ತು ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಎಡ್ ಶೀರನ್ ಅವರು ಅನುಮತಿ ಪಡೆಯದೇ ನಗರದ ಚರ್ಚ್‌ ಸ್ಟ್ರೀಟ್‌ನಲ್ಲಿ ಭಾನುವಾರ ಪ್ರಾರಂಭಿಸಿದ್ದ ‘ಸ್ಟ್ರೀಟ್’ ಸಂಗೀತ ಪ್ರದರ್ಶನವನ್ನು ಪೊಲೀಸರು ತಡೆದರು.

ನಗರದ ಚರ್ಚ್ ಸ್ಟ್ರೀಟ್​ಗೆ ಬೆಳಿಗ್ಗೆ 11 ಗಂಟೆಗೆ ಬಂದ ಎಡ್‌ ಶೀರನ್ ಅವರು ರಸ್ತೆಬದಿ ತಮ್ಮ ಖ್ಯಾತ ಹಾಡು 'Shape Of You' ಹಾಡಲು ಆರಂಭಿಸಿದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಕಬ್ಬನ್ ಪಾರ್ಕ್ ಪೊಲೀಸರು, ಗಾಯನ ನಿಲ್ಲಿಸುವಂತೆ ಶೀರನ್‌ಗೆ ಸೂಚಿಸಿದರು. ಹಾಡು ಮುಂದುವರಿಸಿದ ಕಾರಣ, ಸಂಗೀತ ಉಪಕರಣಗಳ ಕೇಬಲ್ ಸಂಪರ್ಕ ಕಡಿತಗೊಳಿಸಿ, ಕಾರ್ಯಕ್ರಮ ರದ್ದುಗೊಳಿಸಿದರು.

ADVERTISEMENT

ಈ ಘಟನೆಗೆ ಸಂಬಂಧಿಸಿದ ವಿಡಿಯೊ ತುಣುಕುಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಸಂಗೀತ ಕಾರ್ಯಕ್ರಮ ನಿಲ್ಲಿಸಿದ ಪೊಲೀಸರ ವರ್ತನೆಯನ್ನು ಕೆಲವರು ಖಂಡಿಸಿದ್ದಾರೆ. ಗಾಯನ ನಿಲ್ಲಿಸುವ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು, ಶೀರನ್ ಅವರ ಸೌಂಡ್‌ ಬಾಕ್ಸ್‌ನ ಮೈಕ್ರೋಫೋನ್‌ಗಳನ್ನು ತೆಗೆದು ಹಾಕಿರುವುದು ವಿಡಿಯೊದಲ್ಲಿದೆ.

‘ಎಡ್ ಶೀರನ್‌ ಅವರ ತಂಡದಿಂದ ಚರ್ಚ್ ಸ್ಟ್ರೀಟ್‌ನಲ್ಲಿ ಪ್ರದರ್ಶನ ನೀಡಲು ಅನುಮತಿ ಕೇಳಲಾಗಿತ್ತು. ಆದರೆ, ಚರ್ಚ್ ಸ್ಟ್ರೀಟ್ ಜನನಿಬಿಡ ಸ್ಥಳವಾಗಿದ್ದು, ಹೆಚ್ಚು ಜನಸಂದಣಿ ಉಂಟಾಗಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯುಂಟಾಗುವ ಸಾಧ್ಯತೆಯ ಕಾರಣದಿಂದ ಅನುಮತಿ ನಿರಾಕರಿಸಲಾಗಿತ್ತು. ಈ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ’ ಎಂದು ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ತಿಳಿಸಿದ್ದಾರೆ.

‘ಸಾರ್ವಜನಿಕರೊಬ್ಬರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿ ಕ್ರಮ ಕೈಗೊಂಡಿದ್ದೇವೆ. ಅನುಮತಿ ಪಡೆದಿದ್ದರೆ ಕಾರ್ಯಕ್ರಮಕ್ಕೆ ಅವಕಾಶ ನೀಡಲಾಗುತ್ತಿತ್ತು’ ಎಂದು ಹೇಳಿದ್ದಾರೆ.

ಘಟನೆ ನಡೆದ ವೇಳೆ ಸ್ಥಳದಲ್ಲಿದ್ದ ಗಾಯಕ ಸಂಜಯ್ ಸುಕುಮಾರನ್, ‘ಚರ್ಚ್‌ ಸ್ಟ್ರೀಟ್‌ನಲ್ಲಿ ಎಡ್‌ ಶೀರನ್ ಗಾಯನ ಶುರು ಮಾಡುತ್ತಿದ್ದಂತೆ ಪೊಲೀಸ್ ಅಧಿಕಾರಿಯೊಬ್ಬರು ಬಂದು ಕಾರ್ಯಕ್ರಮ ನಿಲ್ಲಿಸುವಂತೆ ಹೇಳಿದರು. ಬಳಿಕ ಸೌಂಡ್ ಬಾಕ್ಸ್‌ನ ಮೈಕ್ರೋಫೋನ್ ತೆಗೆದು ಹಾಕಿದರು. ಈ ರೀತಿಯ ಘಟನೆಗಳಿಂದ ಬೆಂಗಳೂರು ಜನರನ್ನು ನೋಡುವ ದೃಷ್ಟಿ ಬೇರೆ ರೀತಿ ಇರುತ್ತದೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ಮತ್ತೊಂದು ಪುಷ್ಪ 2 ರೀತಿಯ ಘಟನೆಯನ್ನು ತಪ್ಪಿಸಿದ ಪೊಲೀಸರ ಕರ್ತವ್ಯವನ್ನು ಶ್ಲಾಘಿಸುತ್ತೇನೆ. ಸಾರ್ವಜನಿಕ ಕಾರ್ಯಕ್ರಮಗಳಿಗೆ ಪೊಲೀಸರ ಅನುಮತಿಯನ್ನು ಪಡೆಯಬೇಕು. ಜೀವಗಳಿಗೆ ಅಪಾಯ ತಂದುಕೊಳ್ಳಬಾರದು’ ಎಂದು ನಟಿ ದಿವ್ಯಸ್ಪಂದನಾ (ರಮ್ಯಾ) ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಸಂಗೀತ ಕಾರ್ಯಕ್ರಮಗಳ ಭಾಗವಾಗಿ ಭಾರತ ಪ್ರವಾಸದಲ್ಲಿರುವ ಶೀರನ್, ಈಗಾಗಲೇ ಹೈದರಾಬಾದ್ ಹಾಗೂ ಚೆನ್ನೈನಲ್ಲಿ ಪ್ರದರ್ಶನ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.