ADVERTISEMENT

ಕಳ್ಳತನ ಪ್ರಕರಣ: ವಾರಸುದಾರರಿಗೆ ₹95 ಲಕ್ಷ ಮೌಲ್ಯದ ಸ್ವತ್ತುಗಳ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 6:45 IST
Last Updated 26 ನವೆಂಬರ್ 2021, 6:45 IST
ವಶಪಡಿಸಿಕೊಂಡ ಸ್ವತ್ತುಗಳನ್ನು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಪರಿಶೀಲಿಸಿದರು. ಎಸ್ಪಿ ಕೋನವಂಶಿ ಕೃಷ್ಣ, ಡಿವೈಎಸ್ಪಿ ಎಚ್‌.ಸಿ.ಜಗದೀಶ್‌ ಇದ್ದಾರೆ.
ವಶಪಡಿಸಿಕೊಂಡ ಸ್ವತ್ತುಗಳನ್ನು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಪರಿಶೀಲಿಸಿದರು. ಎಸ್ಪಿ ಕೋನವಂಶಿ ಕೃಷ್ಣ, ಡಿವೈಎಸ್ಪಿ ಎಚ್‌.ಸಿ.ಜಗದೀಶ್‌ ಇದ್ದಾರೆ.   

ನೆಲಮಂಗಲ: ತಾಲ್ಲೂಕಿನ ಬೊಮ್ಮನಹಳ್ಳಿಯಲ್ಲಿ ₹4.05 ಕೋಟಿ ವೆಚ್ಚದ ಗ್ರಾಮಾಂತರ ಠಾಣೆ, ಸಂಚಾರಿ ಠಾಣೆ, ಇನ್‌ಸ್ಪೆಕ್ಟರ್ ಕಚೇರಿಯ ನೂತನ ಕಟ್ಟಡದ ಶಂಕುಸ್ಥಾಪನೆಯನ್ನು ಗುರುವಾರ ನೆರವೇರಿಸಲಾಯಿತು ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ತಿಳಿಸಿದರು.

ಪಟ್ಟಣದ ಠಾಣೆಯಲ್ಲಿ ನೆಲಮಂಗಲ ಉಪವಿಭಾಗದಲ್ಲಿ ವಶಪಡಿಸಿಕೊಂಡ ಸ್ವತ್ತುಗಳನ್ನು ವಾರಸುದಾರರಿಗೆ ವಿತರಿಸಿ ಮಾತನಾಡಿದ ಅವರು, ‘ನಿರಂತರವಾಗಿ ದುಷ್ಕೃತ್ಯಗಳಲ್ಲಿ ತೊಡಗುತ್ತಿರುವ ಆರೋಪಿಗಳ ಜಾಮೀನನ್ನು ರದ್ದು ಮಾಡುವ, ಜಾಮೀನು ಪಡೆದು ನ್ಯಾಯಾಲಯಗಳಿಗೆ ಹಾಜರಾಗದವರ ಮತ್ತು ಜಾಮೀನು ಹಾಕಿದವರ ಸ್ವತ್ತುಗಳನ್ನು ವಶಪಡಿಸಿಕೊಳ್ಳುವ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದರು.

‘ರಾಜಕಾಲುವೆ, ನಾಲೆಗಳಿಗೆ ಕಟ್ಟಡ ನಿರ್ಮಾಣದ ತ್ಯಾಜ್ಯ ಹಾಗೂ ಇತರೆ ತ್ಯಾಜ್ಯಗಳನ್ನು ಸುರಿಯುತ್ತಿರುವುದನ್ನು ಸಾರ್ವಜನಿಕರು ಗಮನಿಸಿದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು’ ಎಂದರು.

ADVERTISEMENT

ನೆಲಮಂಗಲ ಉಪ ವಿಭಾಗದ ವ್ಯಾಪ್ತಿಯಲ್ಲಿ ಮೂರು ತಿಂಗಳಲ್ಲಿ 15 ಆರೋಪಿಗಳನ್ನು ಬಂಧಿಸಿ ಅವರಿಂದ 423 ಗ್ರಾಂ ಚಿನ್ನಾಭರಣ, 1.41 ಕೆ.ಜಿ ಬೆಳ್ಳಿ ಆಭರಣ, 855 ಮೊಬೈಲ್, 11 ದ್ವಿಚಕ್ರ ವಾಹನ, 2 ಲಗೇಜ್ ಆಟೊ, 25 ಸಾವಿರ ನಗದು ಸೇರಿದಂತೆ ಒಟ್ಟು ₹95 ಲಕ್ಷ ಮೌಲ್ಯದ ಕಳವು ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.

ಕಾರ್ಯಾಚರಣೆಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ ಪೊಲೀಸ್ ಸಿಬ್ಬಂದಿಗಳಿಗೆ ಪ್ರಶಂಸಾ ಪತ್ರ ವಿತರಿಸಿದರು. ಎಸ್ಪಿ ಡಾ.ಕೋನ ವಂಸಿ ಕೃಷ್ಣ, ಹೆಚ್ಚುವರಿ ಎಸ್ಪಿ ಲಕ್ಷ್ಮೀಗಣೇಶ್, ಡಿವೈಎಸ್ಪಿ ಎಚ್.ಸಿ.ಜಗದೀಶ್, ಇನ್‌ಸ್ಪೆಕ್ಟರ್ ಹರೀಶ್, ಇನ್‌ಸ್ಪೆಕ್ಟರ್‌ಗಳಾದ ಎ.ವಿ.ಕುಮಾರ್, ಬಿ.ಎಸ್.ಮಂಜುನಾಥ್ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.