
ಬೆಂಗಳೂರು: ‘ಸಚಿವ ಜಮೀರ್ ಅಹ್ಮದ್ ಪ್ರತಿನಿಧಿಸುವ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ತಾಲಿಬಾನ್‌ನಂತಾಗಿದೆ. ಕ್ಷೇತ್ರದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಇದೇ 25ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಸ್ತ ಹಿಂದೂ ಸಂಘಟನೆಗಳ ಬೃಹತ್ ಪ್ರತಿಭಟನೆ ನಡೆಯಲಿದೆ’ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಾಮರಾಜಪೇಟೆಯಲ್ಲಿ ಹಿಂದೂಗಳ ಅಸ್ಮಿತೆ ರಕ್ಷಿಸಿ, ಕ್ಷೇತ್ರದಲ್ಲಿ ಭಯಮುಕ್ತ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ ರಾಜ್ಯದ ಎಲ್ಲ ಹಿಂದೂಪರ ಸಂಘಟನೆಗಳು, ಓಂ ಶಕ್ತಿ ಹಾಗೂ ಅಯ್ಯಪ್ಪ ಸ್ವಾಮಿ ಭಕ್ತ ಮಂಡಳಿಗಳು ಒಗ್ಗೂಡಿ ಬೃಹತ್ ಸಂದೇಶ ರವಾನಿಸಲಿದ್ದೇವೆ. ಪ್ರತಿಭಟನೆಯಲ್ಲಿ 5 ಸಾವಿರಕ್ಕೂ ಅಧಿಕ ಹಿಂದೂಗಳು ಭಾಗವಹಿಸುವ ನಿರೀಕ್ಷೆಯಿದೆ’ ಎಂದರು.
‘ಜನವರಿ 4ರಂದು ಅಯ್ಯಪ್ಪ ಸ್ವಾಮಿ ಹಾಗೂ ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಪೆಟ್ಟು ಬಿದ್ದದ್ದು ಭಕ್ತರಿಗಲ್ಲ, ಅವರ ಸ್ವರೂಪದಲ್ಲಿ ಹಿಂದೂ ದೇವರುಗಳಿಗೆ. ಇದರಿಂದ ಹಿಂದೂ ಸಮಾಜದ ಭಾವನೆಗಳಿಗೆ ಗಾಸಿಯಾಗಿದೆ’ ಎಂದು ತಿಳಿಸಿದರು.
‘ಬಾಬು ಜಗಜೀವನ್ ರಾಮ್ ಪುತ್ಥಳಿ ಅನಾವರಣಕ್ಕೂ ಮುಸಲ್ಮಾನರು ಅಡ್ಡಿಪಡಿಸುತ್ತಿದ್ದಾರೆ. ಚಾಮರಾಜಪೇಟೆಯಲ್ಲಿ ಹಿಂದೂಗಳ ಪರಿಸ್ಥಿತಿ ಬಾಂಗ್ಲಾದ ಹಿಂದೂಗಳಿಗಿಂತ ಹೀನಾಯವಾಗಿದೆ. ಇಂತಹ ಘಟನೆಗಳು ಮರುಕಳಿಸಿದರೆ ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿಂದೂ ಜನ ಜಾಗೃತಿ ಮುಖಂಡ ಮೋಹನ್ ಗೌಡ, ಚಾಮರಾಜಪೇಟೆ ಓಂ ಶಕ್ತಿ ಮತ್ತು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳ ಮುಖ್ಯಸ್ಥ ಶಶಿಕುಮಾರ್, ಅಯ್ಯಪ್ಪ ದೇವಸ್ಥಾನದ ಮುಖ್ಯಸ್ಥ ಬಿ.ಎಸ್, ಮಹೇಶ್, ಓಂ ಶಕ್ತಿ ಮಂಡಳಿ ರಾಜ್ಯ ಜಂಟಿ ಕಾರ್ಯದರ್ಶಿ ರಕ್ಷಿತ್ ಜೈ ಗಿರೀಶ್, ಉಪಾಧ್ಯಕ್ಷ ಸುನಿಲ್ ಶೆಟ್ಟಿ ಮತ್ತು ಶ್ರೀರಾಮ ಸೇನಾ ಮುಖಂಡ ಮಂಜುನಾಥ್ ಎಸ್. ಹಾಲವರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.