ADVERTISEMENT

ರಸ್ತೆಗುಂಡಿ, ಚರಂಡಿ ಸರಿಪಡಿಸಲು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ

ಮಳೆ ಅನಾಹುತ ಪ್ರದೇಶಗಳಿಗೆ ಮುಖ್ಯ ಕಾರ್ಯದರ್ಶಿ ಭೇಟಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 16:04 IST
Last Updated 19 ಸೆಪ್ಟೆಂಬರ್ 2025, 16:04 IST
ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳ ಬಗ್ಗೆ ಪರಿಶೀಲನೆ ಮಾಡಲು ನಗರದ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಾಳಾಗಿರುವ ರಸ್ತೆಯ ಫೋಟೊ ತೆಗೆದರು
ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳ ಬಗ್ಗೆ ಪರಿಶೀಲನೆ ಮಾಡಲು ನಗರದ ವಿವಿಧ ಸ್ಥಳಗಳಿಗೆ ಶುಕ್ರವಾರ ಭೇಟಿ ನೀಡಿದ್ದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಹಾಳಾಗಿರುವ ರಸ್ತೆಯ ಫೋಟೊ ತೆಗೆದರು   

ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಉಂಟಾಗಿರುವ ಅನಾಹುತಗಳ ಬಗ್ಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಶುಕ್ರವಾರ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಸಿಲ್ಕ್ ಬೋರ್ಡ್‌ ಮೇಲ್ಸೇತುವೆ ಕೆಳಭಾಗದ ಸುತ್ತ, ರಾಜಕಾಲುವೆಯನ್ನು ಸ್ವಚ್ಛಗೊಳಿಸಬೇಕು. ಬಳಕೆಯಾಗದ ಜಾಗದಲ್ಲಿರುವ ಕಟ್ಟಡ ಅವಶೇಷ, ರಾಜಕಾಲುವೆಯಲ್ಲಿರುವ ಹೂಳನ್ನು ತೆರವುಗೊಳಿಸಬೇಕು. ಪೇವರ್ ಬ್ಲಾಕ್ಸ್ ಅಳವಡಿಸಬೇಕು. ಸಿಲ್ಕ್ ಬೋರ್ಡ್ ಜಂಕ್ಷನ್‍ನಲ್ಲಿ ಜಲಾವೃತವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಬಿಎಂಆರ್‌ಸಿಎಲ್ ವತಿಯಿಂದ ಪಾದಚಾರಿ ಮೇಲ್ಸೇತುವೆ ನಿರ್ಮಾಣವಾಗುತ್ತಿದೆ. ಮೆಟ್ರೊ ಕಾಮಗಾರಿಯನ್ನು ಮುಂದಿನ ವರ್ಷದ ಜೂನ್‌ಗೆ ಪೂರ್ಣಗೊಳಿಸಬೇಕು. ಮೆಟ್ರೊ ನಿಗಮದಿಂದ ಸ್ಕೈವಾಕ್ ನಿರ್ಮಾಣ ಮಾಡಬೇಕು. ಪಾಲಿಕೆಯಿಂದ ಎತ್ತರದ ಪಾದಚಾರಿ ಮಾರ್ಗ (ಎಚ್‌ಆರ್‌ಪಿಸಿ) ನಿರ್ಮಾಣ ಮಾಡಬೇಕು. ರಾಜಕಾಲುವೆಯಲ್ಲಿ ಹೂಳೆತ್ತಬೇಕು. ಆ ಹೂಳನ್ನು ಸ್ಥಳದಲ್ಲಿಯೇ ಬಿಡದೆ ತೆರವುಗೊಳಿಸಬೇಕು ಎಂದು ತಿಳಿಸಿದರು.

ADVERTISEMENT

ಕೆಎಎಲ್ ಕಾಲೊನಿಯಲ್ಲಿ ಅಳವಡಿಸಲು ಬೃಹತ್ ಪೈಪ್‍ಗಳನ್ನು ಜಂಕ್ಷನ್‍ನಲ್ಲಿ ಹಾಕಿದ್ದು, ಅದನ್ನು ತೆರವುಗೊಳಿಸಬೇಕು. ಸಿಲ್ಕ್ ಬೋರ್ಡ್ ಮೆಟ್ರೊ ಕಾಮಗಾರಿ ನಡೆಯುವ ಸ್ಥಳದಲ್ಲಿ ಅವಶೇಷಗಳನ್ನು ರಸ್ತೆಯಲ್ಲೇ ಹಾಕಿದ್ದು, ಅದನ್ನು ತಕ್ಷಣ ತೆರವುಗೊಳಿಸಬೇಕು ಎಂದು ಸೂಚನೆ ನೀಡಿದರು.

ಎಚ್‌ಎಸ್‌ಆರ್ 6ನೇ ಸೆಕ್ಟರ್ ಮಂಗಮ್ಮನ ಪಾಳ್ಯ ಮುಖ್ಯರಸ್ತೆ ಬಳಿ ನಡೆಯುತ್ತಿರುವ ಮೆಟ್ರೊ ಕಾಮಗಾರಿಯ ಅನುಪಯುಕ್ತ ವಸ್ತುಗಳನ್ನು ತೆರವುಗೊಳಿಸಿ, ರಸ್ತೆ ಡಾಂಬರೀಕರಣ ಮಾಡುವಂತೆ ತಿಳಿಸಿದರು. 

ವೈಟ್‌ ಟಾಪಿಂಗ್‌ ಕಾಮಗಾರಿ ನಡೆಯುತ್ತಿರುವ ಅಗರ ಕೆರೆ ರಸ್ತೆಯನ್ನು ಪರಿಶೀಲಿಸಿದರು. ಕೆಲಸ ವೇಗವಾಗಿ ನಡೆಯುತ್ತಿಲ್ಲ ಎಂದು ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರು. ಗುತ್ತಿಗೆದಾರರು ಯಾರು? ಕೆಲಸ ಯಾವಾಗ ಆರಂಭವಾಗಿದೆ? ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಗರ ಜಂಕ್ಷನ್ ಬಳಿ ಮೇಲ್ಸೇತುವೆಯಿಂದ ಬೀಳುವ ನೀರಿಗೆ ಅಳವಡಿಸಿರುವ ಪೈಪ್ ಹಾಳಾಗಿರುವುದನ್ನು ಸರಿಪಡಿಸಲು ಸೂಚಿಸಿದರು. ಸರ್ಜಾಪುರ ಸರ್ವಿಸ್ ರಸ್ತೆಯನ್ನು ಆದ್ಯತೆ ಮೇಲೆ ಅಭಿವೃದ್ಧಿಪಡಿಸಬೇಕು. ಇಬ್ಲೂರು ಜಂಕ್ಷನ್ ಬಳಿ ಪಾದಚಾರಿ ಮೇಲ್ಸೇತುವೆ ನಿರ್ಮಿಸಬೇಕು. ಹಾಳಾಗಿರುವ ಪಣತ್ತೂರು ರಸ್ತೆ ದುರಸ್ತಿ ಮಾಡಬೇಕು. ವಿಬ್‍ಗಯಾರ್ ಸ್ಕೂಲ್ ರಸ್ತೆ, ತೂಬರಹಳ್ಳಿ ಬಳಿ ರಸ್ತೆ ಹಾಗೂ ಚರಂಡಿ ಕಾಮಗಾರಿಗೆ ವೇಗ ನೀಡಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.