ADVERTISEMENT

ಬೆಂಗಳೂರಲ್ಲಿ ಮಳೆ ಆರ್ಭಟ- ಗುಟ್ಟಹಳ್ಳಿಯಲ್ಲಿ ಭಾರೀ ಮಳೆ, ಹಲವೆಡೆ ಜಲಾವೃತ

ದೇಗುಲ, ಉದ್ಯಾನಕ್ಕೆ ನುಗ್ಗಿದ ನೀರು: ದೊಡ್ಡ ಬೊಮ್ಮಸಂದ್ರ, ಗುಟ್ಟಹಳ್ಳಿಯಲ್ಲಿ ಭಾರೀ ಮಳೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2023, 16:14 IST
Last Updated 1 ಸೆಪ್ಟೆಂಬರ್ 2023, 16:14 IST
<div class="paragraphs"><p>ಹೆಬ್ಬಾಳ ಮೇಲ್ಸೇತುವೆಯಲ್ಲಿ ನೀರು ಹೊರಹಾಕಲು ಶ್ರಮಿಸಿದ ಸಂಚಾರ ವಿಭಾಗದ ಕಾನ್‌ಸ್ಟೆಬಲ್‌.</p></div>

ಹೆಬ್ಬಾಳ ಮೇಲ್ಸೇತುವೆಯಲ್ಲಿ ನೀರು ಹೊರಹಾಕಲು ಶ್ರಮಿಸಿದ ಸಂಚಾರ ವಿಭಾಗದ ಕಾನ್‌ಸ್ಟೆಬಲ್‌.

   

ಬೆಂಗಳೂರು: ‘ಸಿಲಿಕಾನ್‌ ಸಿಟಿ’ಯ ಬಹುತೇಕ ಭಾಗದಲ್ಲಿ ಗುರುವಾರ ರಾತ್ರಿ 9 ಗಂಟೆಯಿಂದ ತಡರಾತ್ರಿವರೆಗೆ ಸುರಿದ ಧಾರಾಕಾರ ಮಳೆಯಿಂದ, ಹಲವು ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ದೇವಸ್ಥಾನ, ಉದ್ಯಾನ, ಮನೆಗಳಿಗೂ ನೀರು ನುಗ್ಗಿ ನಷ್ಟ ಸಂಭವಿಸಿದೆ.

ಮಲ್ಲೇಶ್ವರದ ರಾಯರ ಮಠಕ್ಕೆ ಮಳೆ ನೀರು ನುಗ್ಗಿ ಪೂಜಾ ಕಾರ್ಯಕ್ಕೆ ಅಡ್ಡಿ ಉಂಟಾಯಿತು. ಅರ್ಚಕರು ಹಾಗೂ ಭಕ್ತರು ಮಳೆಯ ನೀರನ್ನು ಹೊರಹಾಕಲು ಶ್ರಮಿಸಿದರು. ನೀರು ಹೊರಹಾಕಿದ ನಂತರ ಪೂಜಾ ಕಾರ್ಯಗಳು ನಡೆದವು.

ADVERTISEMENT

ಹೆಬ್ಬಾಳ ಮೇಲ್ಸೇತುವೆಯಲ್ಲಿ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸಂಚಾರ ಸ್ಥಗಿತಗೊಂಡಿತ್ತು. ಸಂಚಾರ ಪೊಲೀಸ್‌ ವಿಭಾಗದ ಕಾನ್‌ಸ್ಟೆಬಲ್‌ ಒಬ್ಬರು ನೀರಿನಲ್ಲಿಯೇ ಸಾಗಿ ಪೈಪ್‌ನಲ್ಲಿ ಕಟ್ಟಿದ್ದ ಕಸ ತೆಗೆದು ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ನಂತರವೇ, ವಾಹನಗಳು ಮುಂದಕ್ಕೆ ಚಲಿಸಲು ಸಾಧ್ಯವಾಯಿತು. ಹೆಬ್ಬಾಳ ಸುತ್ತಮುತ್ತ ಭಾರೀ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತ್ತು.

ಶಿವಾನಂದ ಅಂಡರ್‌ಪಾಸ್‌ನಲ್ಲೂ ನೀರು ಸಂಗ್ರಹವಾಗಿದ್ದರಿಂದ ವಾಹನ ಸಂಚಾರ ಸ್ಥಗಿತಗೊಂಡಿತ್ತು. ವಾಹನಗಳು ಪರ್ಯಾಯ ಮಾರ್ಗದಲ್ಲಿ ಸಂಚರಿಸಿದವು. ಬಿಡಿಎ ಕಚೇರಿ ಬಳಿಯ ಕೆಳಸೇತುವೆ ಬಳಿ ಅಪಾರ ಪ್ರಮಾಣದ ನೀರು ನಿಂತು ಸಮಸ್ಯೆ ಎದುರಾಗಿತ್ತು. ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ನೀರು ಸಂಗ್ರಹಗೊಂಡು ವಾಹನಗಳು ಸಾಗಲು ಸಮಸ್ಯೆ ಉಂಟಾಗಿತ್ತು. ಈ ಭಾಗದ ರಸ್ತೆಗಳು ಜಲಾವೃತಗೊಂಡಿದ್ದವು. ಶಾಂತಿನಗರದ ರಾಜಕಾಲುವೆಯಲ್ಲಿ ಅಪಾರ ಪ್ರಮಾಣದ ನೀರು ಹರಿಯಿತು.

ಕೆರೆಯಂತಾದ ಉದ್ಯಾನ

ಆರ್‌ಎಂವಿ 2ನೇ ಹಂತದ ಸೌಂದರ್ಯ ಉದ್ಯಾನಕ್ಕೆ ಚರಂಡಿ ನೀರು ನುಗ್ಗಿ ಸಂಪೂರ್ಣ ಜಲಾವೃತಗೊಂಡಿತ್ತು. ಶುಕ್ರವಾರ ಬೆಳಿಗ್ಗೆ ವಾಯುವಿಹಾರಕ್ಕೆ ಬಂದವರು ಹಿಂತಿರುಗಿದರು.

ಎಂಎಸ್‌ ಪಾಳ್ಯದ ಹಲವು ಮನೆಗಳಿಗೆ ಮಳೆಯ ನೀರು ನುಗ್ಗಿತ್ತು. ಅಗತ್ಯ ವಸ್ತುಗಳು ನೀರಿನಲ್ಲಿ ತೇಲಿದವು. ರಾತ್ರಿಯಿಡೀ ಜಾಗರಣೆ ಮಾಡಿದ್ದ ನಿವಾಸಿಗಳು ಶುಕ್ರವಾರ ಬೆಳಿಗ್ಗೆ ನೀರು ಹೊರಹಾಕಿದರು.

ಉರುಳಿದ ಮರಗಳು: 
ಮಳೆ ಹಾಗೂ ಗಾಳಿಗೆ ನಗರದ 20 ಸ್ಥಳದಲ್ಲಿ ಬೃಹತ್‌ ಮರಗಳು ಧರೆಗೆ ಉರುಳಿದ್ದವು. ಸಂಜಯನಗರ, ಶಾಂತಿನಗರ, ಕೋರಮಂಗಲ, ಸದಾಶಿವನಗರ, ಹೊಸೂರು, ಕೋರಮಂಗಲ, ವೈಯ್ಯಾಲಿಕಾವಲ್‌ ಮುಖ್ಯರಸ್ತೆಯಲ್ಲಿ ಮರಗಳು ಉರುಳಿದ್ದವು. ಪರಪ್ಪನ ಅಗ್ರಹಾರದ ರಾಯಲ್‌ ಕಂಟ್ರಿ ಲೇಔಟ್‌ನಲ್ಲಿ ಮಳೆಯಿಂದ ರಸ್ತೆಯ ಒಂದು ಭಾಗ ಕೊಚ್ಚಿ ಹೋಗಿತ್ತು.

ಸೆ.7ರ ತನಕ ನಗರದಲ್ಲೂ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಎಚ್ಚರ ವಹಿಸುವಂತೆ ಹವಾಮಾನ ಇಲಾಖೆ ತಿಳಿಸಿದೆ.

ಜಲಾವೃತಗೊಂಡಿದ್ದ ಆರ್‌ಎಂವಿ 2ನೇ ಹಂತದ ಸೌಂದರ್ಯ ಉದ್ಯಾನ. – ಪ್ರಜಾವಾಣಿ ಚಿತ್ರ
ಡಾಲರ್ಸ್‌ ಕಾಲೊನಿಯ ಅಪಾರ್ಟ್‌ಮೆಂಟ್‌ನ ನೆಲಮಹಡಿಯಲ್ಲಿ ಸಂಗ್ರಹಗೊಂಡಿದ್ದ ಮಳೆ ನೀರು. 
ಡಾಲರ್ಸ್‌ ಕಾಲೊನಿಯಲ್ಲಿ ರಸ್ತೆಗೆ ಉರುಳಿದ್ದ ಮರ.
ಮಳೆ ಗಾಳಿಗೆ ಹೊಸೂರು ರಸ್ತೆಯಲ್ಲಿ ಧರೆಗುರುಳಿದ್ದ ಬೃಹತ್‌ ಮರ. ಪ್ರಜಾವಾಣಿ ಚಿತ್ರ

ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ

ನಗರದಲ್ಲಿ ಭಾರೀ ಮಳೆಗೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಸಂಚಾರ ವಿಭಾಗದ ಪೊಲೀಸರು ತಡರಾತ್ರಿ ತನಕ ಉತ್ತಮ ಕೆಲಸ ಮಾಡಿ ಸಂಚಾರಕ್ಕೆ ಅನುಕೂಲ ಕಲ್ಪಿಸಿದ್ದಾರೆ. ಹೆಬ್ಬಾಳದಲ್ಲಿ ಸಂಗ್ರಹವಾಗಿದ್ದ ಅಪಾರ ಪ್ರಮಾಣದ ನೀರಿನಲ್ಲೇ ಮುಂದೆ ಸಾಗಿ ನೀರು ಹೊರಹೋಗುವಂತೆ ಮಾಡಿದ್ದಾರೆ. ಪೊಲೀಸರ ಕಾರ್ಯ ಶ್ಲಾಘನೀಯ ಎಂದು ನಗರ ಪೊಲೀಸ್ ಕಮಿಷನರ್ ಬಿ. ದಯಾನಂದ್ ಅವರು ‘ಎಕ್ಸ್‌’ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ.

ರಸ್ತೆಗಳು ಜಲಾವೃತ ವಿದ್ಯುತ್‌ ವ್ಯತ್ಯಯ‌

ನೆಲಮಂಗಲ: ಪಟ್ಟಣದಲ್ಲೂ ಸುರಿದ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಪಟ್ಟಣದಲ್ಲಿ 84 ಮಿ.ಮೀ ಶಿವಗಂಗೆಯಲ್ಲಿ 76 ತ್ಯಾಮಗೊಂಡ್ಲುನಲ್ಲಿ 114 ಮೀ.ಮೀ ಮಳೆಯಾಗಿದೆ. ನೆಲಮಂಗಲ ಕೆರೆ ಹಾಗೂ ರಾಜಕಾಲುವೆ ನೀರು ಮನೆಗಳಿಗೆ ನೀರು ನುಗ್ಗುಬಹುದು ಜನರು ರಾತ್ರಿಯಿಡೀ ಆತಂಕಗೊಂಡಿದ್ದರು. ರಸ್ತೆಗಳಲ್ಲಿ ಮೊಣಕಾಲುದ್ದ ನೀರು ಹರಿಯುತ್ತಿದ್ದರಿಂದ ದ್ವಿಚಕ್ರ ವಾಹನ ಸವಾರರು ಪರ್ಯಾಯ ರಸ್ತೆಗಳನ್ನು ಬಳಸಿ ಮನೆಗೆ ತೆರಳಿದರು.

24 ಗಂಟೆಯ ಅವಧಿಯಲ್ಲಿ ಸುರಿದ ಮಳೆ ಪ್ರಮಾಣ (ಮಿ.ಮೀಗಳಲ್ಲಿ)

ರಾಜಮಹಲ್‌ ಗುಟ್ಟಹಳ್ಳಿ;136ದೊಡ್ಡ ಬೊಮ್ಮಸಂದ್ರ ಹಾಗೂ ವಿದ್ಯಾರಣ್ಯಪುರ;112ಬಸವನಗುಡಿ ವಿದ್ಯಾಪೀಠ ಕುಮಾರಸ್ವಾಮಿ ಲೇಔಟ್‌;95ಶಾಂತಿನಗರ,ಸಂಪಂಗಿರಾಮನಗರ;89ಎಚ್‌ಎಎಲ್‌;87ಕೊಡಿಗೇಹಳ್ಳಿ;86ರಾಜರಾಜೇಶ್ವರಿನಗರ;84ಕೆಂಗೇರಿ;76ಯಲಹಂಕ;74

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.