ADVERTISEMENT

ಬೆಂಗಳೂರು ನಗರದ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ

​ಪ್ರಜಾವಾಣಿ ವಾರ್ತೆ
Published 9 ಮೇ 2022, 3:14 IST
Last Updated 9 ಮೇ 2022, 3:14 IST
ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಚಾವಣಿ ಕುಸಿದಿರುವುದು
ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಚಾವಣಿ ಕುಸಿದಿರುವುದು   

ಬೆಂಗಳೂರು: ನಗರದ ಹಲವೆಡೆ ಭಾನುವಾರ ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದ್ದು, ಹಲವು ಮರ ಹಾಗೂ ವಿದ್ಯುತ್‌ ಕಂಬಗಳು ಧರೆಗೆ ಉರುಳಿ ಸಾಕಷ್ಟು ಹಾನಿಯಾಗಿದೆ.

ಬೆಳಿಗ್ಗೆಯಿಂದಲೇ ಬಿಸಿಲಿನ ವಾತಾವರಣ ಇತ್ತು. ಸಂಜೆಯ ವೇಳೆ ಆಗಸದಲ್ಲಿ ಕಾರ್ಮೋಡಗಳು ದಟ್ಟೈಸಿ ಬಿರುಗಾಳಿ ಸಹಿತ ಜೋರು ಮಳೆ ಶುರುವಾಯಿತು.

ಕೋರಮಂಗಲದಲ್ಲಿ ಮರ ಬಿದ್ದು ಕಾರು ಹಾಗೂ ಆಂಬುಲೆನ್ಸ್‌ ಜಖಂ
ಗೊಂಡಿದ್ದವು. ಬಿಟಿಎಂ ಲೇಔಟ್‌ನಲ್ಲಿ ಒಟ್ಟು 7 ಕಡೆ ವಿದ್ಯುತ್‌ ಕಂಬಗಳು ಧರೆಗೆ ಉರುಳಿದವು. ಎನ್‌.ಎಸ್‌.ಪಾಳ್ಯದಲ್ಲಿ ಮರ‌ವೊಂದು ಬಿದ್ದಿದ್ದರಿಂದ ಕಾರೊಂದು ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು. ಎಚ್‌ಎಸ್‌ಆರ್‌ ಲೇಔಟ್‌ನ 24ನೇ ಮುಖ್ಯರಸ್ತೆಯಲ್ಲಿ ಮರದ ಕೊಂಬೆಯೊಂದು ಮುರಿದುಬಿದ್ದು ಕಾರೊಂದಕ್ಕೆ ಹಾನಿಯಾಗಿತ್ತು.

ADVERTISEMENT

ಎಚ್‌ಎಸ್‌ಆರ್‌ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಟಲ್‌ ಬಿಹಾರಿ ವಾಜಪೇಯಿ ಕ್ರೀಡಾಂಗಣದ ಗ್ಯಾಲರಿಯ ಚಾವಣಿಯೂ ಕುಸಿದು ಬಿದ್ದಿದೆ. ಮಾರ್ಚ್‌ 1ರಂದು ನಡೆದಿದ್ದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕ್ರೀಡಾಂಗಣವನ್ನು ಉದ್ಘಾಟಿಸಿದ್ದರು. ಬಿರುಗಾಳಿಯಿಂದಾಗಿ ಬಿಟಿಎಂ ಬಡಾವಣೆಯ ಬೇಕರಿಯೊಂದರ ಎದುರು ಹಾಕಲಾಗಿದ್ದ ಚಾವಣಿಯೂ ಉರುಳಿ ಬಿದ್ದಿತು. ಆ ಚಾವಣಿಯ ಕೆಳಗೆ ಕೆಲ ಯುವಕರು ನಿಂತಿದ್ದರು. ಅವರಿಗೆ ಯಾವುದೇ ತೊಂದರೆ ಆಗಿಲ್ಲ.

ರಾಜರಾಜೇಶ್ವರಿ ನಗರ, ಕೆಂಗೇರಿ ಸೇರಿದಂತೆ ಕೆಲವೆಡೆ ಆಲಿಕಲ್ಲು ಸಹಿತ ಮಳೆಯಾಗಿದೆ. ಈ ದೃಶ್ಯಗಳನ್ನು ಮೊಬೈಲ್‌ಗಳಲ್ಲಿ ಸೆರೆಹಿಡಿದಿರುವ ಹಲವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಖುಷಿಪಟ್ಟಿದ್ದಾರೆ. ಆಲಿಕಲ್ಲು ಮಳೆಯಿಂದಾಗಿ ಕೆಂಗೇರಿ ಬಳಿ ರಸ್ತೆ ಕಾಣದೆ ಕಾರು ಚಾಲಕರೊಬ್ಬರು ಪರದಾಡಿರುವ ವಿಡಿಯೊ ಕೂಡ ಸಾಮಾ
ಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ವಿದ್ಯುತ್‌ ವ್ಯತ್ಯಯ: ಭಾರಿ ಗಾಳಿ ಹಾಗೂ ಮಳೆಯಿಂದಾಗಿ ಕಂಬಗಳು ಉರುಳಿ ಬಿದ್ದಿದ್ದರಿಂದ ವಿದ್ಯುತ್‌ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿತ್ತು.

‘ಎಚ್‌ಎಸ್‌ಆರ್‌ ಲೇಔಟ್‌ನಲ್ಲಿ 35, ನೆಲಮಂಗಲದಲ್ಲಿ 21 ಮರಗಳು ಬಿದ್ದಿರುವ ಕುರಿತು ವರದಿಯಾಗಿದೆ. ಕೆಂಗೇರಿ, ಬಂಡೇಮಠ, ಎಚ್‌ಎಸ್‌ಆರ್‌ ಲೇಔಟ್‌ ಹಾಗೂ ವಿವಿಧೆಡೆ ವಿದ್ಯುತ್‌ ವ್ಯತ್ಯಯವಾಗಿದೆ’ ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ನಾಗರಿಕರ ಪರದಾಟ: ಮಳೆಯಿಂದಾಗಿ ಹಲವೆಡೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಇದರಿಂದ ನಾಗರಿಕರು ಪರದಾಡಬೇಕಾಯಿತು. ಕೆ.ಆರ್‌.ಮಾರುಕಟ್ಟೆ ಸೇರಿದಂತೆ ನಗರದ ವಿವಿಧೆಡೆ ಬೀದಿಬದಿ ವ್ಯಾಪಾರಿಗಳೂ ಸಂಕಷ್ಟ ಎದುರಿಸುವಂತಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.